ಪುತ್ತೂರು: ಬೆಳ್ತಂಗಡಿ ಸೌಜನ್ಯ ಕೊಲೆ ಪ್ರಕರಣದ ನೈಜ ಆರೋಪಿಯನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಪುತ್ತೂರು ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಮಾತನಾಡಿ ಹನ್ನೊಂದು ವರ್ಷದ ಹಿಂದೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವಿವಿಧ ತನಿಖಾ ಸಂಸ್ಥೆಯ ಮೂಲಕ ನಡೆಸಿದರೂ, ಆರೋಪಿ ನಿರಪರಾಧಿ ಎಂದು ಘೋಷಣೆಯಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮರು ತನಿಖೆಯನ್ನು ನಡೆಸಬೇಕು. ಸೌಜನ್ಯ ಪ್ರಕರಣದ ತನಿಕೆಯನ್ನು ನಡೆಸಿದ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ಸಂಘದ ಪ್ರಧಾನ ಕಛೇರಿಯಿಂದ ಸಹಾಯಕ ಆಯುಕ್ತರ ಕಛೇರಿಯವರೆಗೆ ರೈತರ ಮೆರವಣಿಗೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಅವರಿಂದ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ಮನವಿಯನ್ನು ಸ್ವೀಕರಿಸಿದರು.
ಸಂಘದ ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಭಟ್ ಬಡಿಲ, ಹೊನ್ನಪ್ಪಗೌಡ ಪರಣಿ, ಉಡುಪಿ ಕಾಸರಗೋಡು ೪೦೦ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ತುಂಬೆ ಹೋರಾಟ ಸಮಿತಿಯ ಭಾಸ್ಕರ ಬ್ರಹ್ಮರಕೂಟ್ಲು, ಪುತ್ತೂರು ತಾಲೂಕು ಕಾರ್ಯದರ್ಶಿ ವಸಂತ ಪೆರಾಬೆ, ವಿಟ್ಲ ತಾಲೂಕು ಕಾರ್ಯದರ್ಶಿ ಸುದೇಶ್ ಭಂಡಾರಿ, ಪುಣಚ ವಲಯ ಅಧಕ್ಷ ಇಸುಬು, ಕುಂಬ್ರ ವಲಯ ಅಧ್ಯಕ್ಷ ಶೇಖರ ರೈ, ಪಡುವನ್ನೂರು ವಲಯ ಅಧ್ಯಕ್ಷ ಶಿವಚಂದ್ರ, ಸವಣೂರು ವಲಯ ಅಧ್ಯಕ್ಷ ಯತೀಂದ್ರ, ಕಾರ್ಯದರ್ಶಿ ಭರತ್ ರೈ ಸವಣೂರು, ಹರಿಣಾಕ್ಷಿ ಮೇರ್ಲ, ಕಛೇರಿ ಕಾರ್ಯದರ್ಶಿ ಕಲ್ಪನಾ ಶೆಣೈ ಮತ್ತಿತರರು ಉಪಸ್ಥಿತರಿದ್ದರು.