ವಿಟ್ಲ: ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಹಾಗೂ ಚಂದಳಿಕೆ ಸಾರ್ವಜನಿಕ ಶ್ರೀ ಗಣೇಶೋತ್ಸವದ ಬೆಳ್ಳಿಹಬ್ಬ ಸಮಿತಿ ಜಂಟಿ ಆಶ್ರಯದಲ್ಲಿ 25ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳ್ಳಿಹಬ್ಬ ಕ್ರೀಡೋತ್ಸವ ಸೆ.3 ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ವಿಟ್ಲ ಚಂದಳಿಕೆ ಶಾಲಾ ವಠಾರದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ರ ತನಕ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ ಹಾಗೂ ಅಂಚೆ ಇಲಾಖೆಯ ಜನೋಪಯೋಗಿ ಸೇವಾ ಸೌಲಭ್ಯಗಳ ಉದ್ಘಾಟನೆಯೂ ನಡೆಯಲಿದೆ.
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದು, ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಂಕರ ಭಟ್ ಬದನಾಜೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಟ್ಲ ಠಾಣಾ ನಿರೀಕ್ಷಕ ನಾಗರಾಜ ಎಚ್.ಇ., ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಚಂದಳಿಕೆ ಶಾಲಾ ದೈಹಿಕ ಶಿಕ್ಷಕ ಸುರೇಶ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಮತಿ ದೇಜಪ್ಪ ಪೂಜಾರಿ, ಮುಕ್ಯೋಪಾಧ್ಯಾಯರು ದ. ಕ. ಜಿ. ಪಂ. ಶಾಲೆ ಚಂದಳಿಕೆ ವಿಶ್ವನಾಥ ಗೌಡ ಕುಳಾಲು ಪಾಲ್ಗೊಳ್ಳಲಿದ್ದಾರೆ.
ಕ್ರೀಡಾಕೂಟದ ಅಂಗವಾಗಿ ಪುರುಷರಿಗೆ, ಮಹಿಳೆಯರಿಗೆ, ಅಂಗನವಾಡಿ ಮಕ್ಕಳಿಗೆ, ಬಾಲಕರಿಗೆ ಮತ್ತು ಬಾಲಕಿಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. 10ನೇ ತರಗತಿ ಒಳಗಿನ ಮಕ್ಕಳಿಗೆ (200ಕೆ.ಜಿ.) ಮಕ್ಕಳ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.