ಪುತ್ತೂರು: ರಕ್ಷಾಬಂಧನ ಸಹೋದರ -ಸಹೋದರಿಯರ ಸಂಬಂಧಕ್ಕೆ ಮಾತ್ರ ಸೀಮಿತವಾಗದೆ ವಿಶ್ವಬಂಧುತ್ವಕ್ಕೆ ಸಾಕ್ಷಿಯಾಗಿದೆ. ಭಾರತೀಯ ಸಂಪ್ರದಾಯಗಳು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಪ್ರತೀ ಹಬ್ಬದಲ್ಲೂ ಬದುಕಿಗೆ ಬೇಕಾದ ಸಂದೇಶಗಳು ಇರುತ್ತದೆ. ಅವುಗಳನ್ನು ನಾವು ಅರಿತುಕೊಳ್ಳಬೇಕು. ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಈ ರಕ್ಷಾಬಂಧನ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ಮತ್ತು ಮಂಗಳೂರು ಜಿಲ್ಲೆಯ ಜಿಲ್ಲಾ ಸಂಘಟನಾ ಕಾರ್‍ಯದರ್ಶಿಯಾದ ಶ್ರೀರಾಮ್ ಅಂಗಿರಸ ಹೇಳಿದರು.
ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಕ್ಷಾಬಂಧನ ಕಾರ್‍ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಮಾತನಾಡಿ, ,ಹಿಂದೂ ಧರ್ಮದಲ್ಲಿ ರಕ್ಷಾ ಬಂಧನಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ರಕ್ಷಾ ಬಂಧನ ರಕ್ಷೆ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಎಂಬ ಎರಡು ಪದಗಳಿಂದ ಕೂಡಿದೆ. ಪ್ರಸ್ತುತ, ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ ಮತ್ತು ಇದು ಸಹೋದರಿ ಮತ್ತು ಸಹೋದರರ ನಡುವಿನ ಪ್ರೀತಿಯನ್ನು ಬಲಪಡಿಸುವ ಮತ್ತು ಪುನರುಚ್ಚರಿಸುವ ಉತ್ಸವವಾಗಿದೆ ಎಂದು ಹೇಳಿದರು.
ಬಳಿಕ ಉಪನ್ಯಾಸಕರು, ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಶ್ಲೋಕ ಪಠಿಸಿ ಪರಸ್ಪರ ರಕ್ಷಾಧಾರಣೆಯನ್ನು ಮಾಡಿದರು. ವಿದ್ಯಾರ್ಥಿ ಚರಣ್ ಸ್ವಾಗತಿಸಿ, ವಿದ್ಯಾರ್ಥಿನಿ ಕು. ಶ್ರೇಯಾ ವಂದಿಸಿದರು.