ಮಹಾರಾಷ್ಟ್ರ: 14 ತಿಂಗಳ ಮಗುವೊಂದು ವಿಸ್ತಾರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಠಾತ್ತನೆ ಹೃದಯ ನಿಂತು ಬಿಟ್ಟ ಪರಿಣಾಮ ವಿಮಾನ ಪೈಲೆಟ್ ಗಳು ಮಾರ್ಗ ಬದಲಿಸಿ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ಬೆಂಗಳೂರಿನಿಂದ ನವದೆಹಲಿಗೆ ತೆರಳಬೇಕಿದ್ದ ವಿಸ್ತಾರಾ ವಿಮಾನ. 14 ತಿಂಗಳ ಮಗು ಹಾಗೂ ಎಲ್ಲಾ ಪ್ರಯಾಣಿಕರು ಆಕಾಶದೆತ್ತರ ಹಾರುತ್ತ ಪ್ರಯಾಣಿಸುತ್ತಿರಬೇಕಾದರೆ ಆ ಕಂದನ ಹೃದಯ ಹಠಾತ್ ನಿಂತೇ ಬಿಟ್ಟಿತು. ಮೊದಲೇ ಹೃದಯ ಸಮಸ್ಯೆ ಇದ್ದುದರಿಂದ ಮಗುವಿನ ಸ್ಥಿತಿ ತೀರ ಹದಗೆಟ್ಟಿತು. ವಿಮಾನದಲ್ಲಿದ್ದ ವೈದ್ಯರು ತಕ್ಷಣವೇ ಮಗುವನ್ನು ಪರೀಕ್ಷಿಸಿದರು. ಮಗುವಿನ ಸ್ಥಿತಿ ಹದಗೆಟ್ಟು ಉಸಿರಾಟ ಸ್ಥಗಿತಗೊಂಡಿದ್ದು, ವಿಮಾನದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಕೂಡಲೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರ ಜೊತೆ ಸಹ ಪ್ರಯಾಣಿಕರು ಕೈ ಜೋಡಿಸಿದರು. ಮಗುವಿಗೆ ಸಿಪಿಆರ್ ನೀಡಿದರು ಮತ್ತು ಸಾಧ್ಯವಾದಷ್ಟು ಎಲ್ಲ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಿದರು. ಲಭ್ಯವಿರುವ ಸಂಪನ್ಮೂಲಗಳ ಸಹಾಯದಿಂದ 45 ನಿಮಿಷ ಹೆಣ್ಣು ಮಗುವಿಗೆ ಚಿಕಿತ್ಸೆ ನೀಡಲಾಯಿತು. ಆಶ್ಚರ್ಯವೆಂಬಂತೆ ಸಿಪಿಆರ್ ಬಳಿಕ ಮಗು ಉಸಿರಾಡತೊಡಗಿದೆ. ಆದರೂ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುಬೇಕಾಗಿದೆ ಎಂದು ವೈದ್ಯರು ಸೂಚಿಸಿದರು. ಮಗುವಿನ ಗಂಭೀರ ಸ್ಥಿತಿಯನ್ನು ನೋಡಿದ ವಿಮಾನಯಾನ ತಂಡವು ತುರ್ತು ಭೂಸ್ಪರ್ಶಕ್ಕಾಗಿ ನಾಗುರ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿತ್ತು. ಬಳಿಕ ಅಧಿಕಾರಿಗಳು ತುರ್ತು ಭೂಸ್ಪರ್ಶಕ್ಕೆ ಅನುಮತಿ ನೀಡಿದರು. ವಿಮಾನಯಾನದ ಮಾರ್ಗವನ್ನು ಬದಲಾಯಿಸಿದ ಪೈಲಟ್‌ಗಳು ನಾಗುರ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ಆದಾಗಲೇ ವಿಮಾನ ನಿಲ್ದಾಣದಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಕಿಮ್ಸ್-ಕಿಂಗ್ಸ್ ಆಸ್ಪತ್ರೆಯ ಆಂಬ್ಯುಲೆನ್ಸ್ ಸಿದ್ಧವಾಗಿ ನಿಂತಿತ್ತು. ವಿಮಾನ ಇಳಿದ ತಕ್ಷಣ ಮಗುವನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಕಂದಮ್ಮನ ಜೀವ ಉಳಿಸಲು ಡಾ. ನವದೀಪ್ ಕೌರ್, ಡಾ. ದಮನ್‌ದೀಪ್ ಸಿಂಗ್, ಡಾ. ರಿಷಭ್ ಜೈನ್, ಡಾ. ಓಶಿಕಾ ಮತ್ತು ಡಾ. ಅವಿಜ್ಞಾ ತಕ್ಸಕ್ ಅವರುಗಳು ತಕ್ಷಣವೇ ಸ್ಪಂದಿಸಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಮಗು ಡಾ. ಕುಲದೀಪ್ ಸುಖದೇವ್ ಅವರ ಆರೈಕೆಯಲ್ಲಿದೆ. ಆದರೆ ಮಗು ಇನ್ನೂ ಪ್ರಜ್ಞಾಹೀನವಾಗಿದೆ ಮತ್ತು ಗಂಭೀರ ಸ್ಥಿತಿಯಲ್ಲಿದ್ದು ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಕುಟುಂಬ ಮತ್ತು ಸಂಬಂಧಿಕರಿಗೆ ವೈದ್ಯಾಧಿಕಾರಿಗಳು ಧೈರ್ಯ ತುಂಬಿದ್ದಾರೆ.