ಪುತ್ತೂರು: ಶಶಾಂಕನ ದಕ್ಷಿಣ ಧ್ರುವಕ್ಕೆ ಪ್ರವೇಶ ಮಾಡಿದ ಮೊದಲ ರಾಷ್ಟ್ರ ಭಾರತ. ಚಂದ್ರಯಾನ 3 ಗೆ ಸಿಕ್ಕ ಯಶಸ್ಸು ಭರತಖಂಡದಲ್ಲಿ ಸಂಭ್ರಮ ಮೂಡಿಸಿದೆ.ಈ ಯಶಸ್ಸಿನಿಂದಾಗಿ ಅಭಿವೃದ್ಧಿ ಹೊಂದಿದ ನವಭಾರತದ ಉದಯವಾಗಿದೆ. ವೈಜ್ಞಾನಿಕ ವಿಕ್ರಮವೊಂದರ ಹೊತ್ತಿನಲ್ಲಿ ಈ ಹಿಂದೆಂದೂ ಕಂಡುಬರದ ಏಕತೆ, ಐಕ್ಯತೆ, ಉತ್ಸಾಹ ಭಾರತೀಯರಲ್ಲಿ ಪ್ರಕಟವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಹೇಳಿದರು.
ನರೇಂದ್ರ ಪ.ಪೂ. ಕಾಲೇಜಿನಲ್ಲಿ ಚಂದ್ರಯಾನ-3 ರ ಯಶಸ್ವಿಯ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
ಇಸ್ರೋದ ಈ ಯಶಸ್ಸು ಬರೀ ಅದರ ಯಶಸ್ಸು ಮಾತ್ರವಲ್ಲ.ಬರೀ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಿಕ್ಕ ಯಶಸ್ಸು ಮಾತ್ರವಲ್ಲ. ಇಡೀ ಭಾರತಕ್ಕೆ ಹಲವು ಕೋನಗಳಿಂದ ಸಿಕ್ಕ ಯಶಸ್ಸು. ಇದು ಭಾರತೀಯ ಯುವಜನತೆಯ ಚಿಂತನೆಯ ದಿಕ್ಕನ್ನೇ ಬದಲಿಸುವುದು ಖಚಿತ ಎಂದು ಹೇಳಿದರು.
ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಕಾರ್ತಿಕ್ ಕುಮಾರ್ ಚಂದ್ರಯಾನ-3 ಯೋಜನೆಯ ವಿವರಗಳನ್ನು ವಿದ್ಯಾರ್ಥಿಗಳಿಗೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ತಿಳಿಸಿದರು. ವೇದಿಕೆಯಲ್ಲಿ ಕಾಲೇಜಿನ ಸಂಚಾಲಕ ಸಂತೋಷ್ ಬಿ. ಮತ್ತು ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ಮಧುರಾ ಸ್ವಾಗತಿಸಿ, ವಂದಿಸಿದರು.