ಪುತ್ತೂರು: ಕಳೆದ 11 ವರ್ಷಗಳ ಹಿಂದೆ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಸೌಜನ್ಯಳ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಲು ಮರುತನಿಖೆಗಾಗಿ ಆಗ್ರಹಿಸಿ, ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಪುತ್ತೂರು ಅಭಿನವ ಭಾರತ ಮಿತ್ರಮಂಡಳಿ ಹಾಗೂ ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ಜಂಟಿ ಆಶ್ರಯದಲ್ಲಿ ಬೃಹತ್ ಜನಜಾಗೃತಿ ಸಭೆ ಆ.28 ಸೋಮವಾರ ಸಂಜೆ 3 ಗಂಟೆಗೆ ಪುತ್ತೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ಅಭಿನವ ಭಾರತ ಮಿತ್ರಮಂಡಳಿ ಪ್ರವರ್ತಕ ದಿನೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಸ್ತುತ ತಾಯಿತನಕ್ಕೆ ಗೌರವ ಇಲ್ಲದಂತಾಗಿದೆ. ತಾಯಿತನಕ್ಕೆ ಗೌರವ ನೀಡುವುದು ನಮ್ಮ ನೆಲದ ಸಂಸ್ಕೃತಿ. ಜಗತ್ತಿಗೆ ಜ್ಞಾನ, ವೈರಾಗ್ಯ, ಸದ್ವಿಚಾರ ನೀಡಿದ ಈ ನೆಲದಲ್ಲಿ ನಮ್ಮ ಮಾತೆಯರು, ಸಹೋದರಿಯರ ಮೇಲಾಗುವ ದೌರ್ಜನ್ಯ, ಅತ್ಯಾಚಾರಗಳು ಆತಂಕ ಸೃಷ್ಟಿಸಿದೆ. ಈ ನಿಟ್ಟಿನಲ್ಲಿ ತಾಯಿತನಕ್ಕೆ, ಹೆಣ್ಣಿಗೆ ರಕ್ಷಣೆ ನೀಡುವ ಉದ್ದೇಶದಿಂದ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಸೌಜನ್ಯ ಪ್ರಕರಣದಲ್ಲಿ ನಿರಪರಾಧಿಯಾದ ಸಂತೋಷ್ ರಾವ್ ಅವರಿಗಾಗದ ನಷ್ಟವನ್ನು ಭರಿಸಿ ಪರಿಹಾರಕ್ಕಾಗಿ ಸಭೆಯಲ್ಲಿ ಆಗ್ರಹಿಸಲಾಗುವುದು ಎಂದರು.
ಆ.28 ರಂದು ಸಂಜೆ 3 ಗಂಟೆಗೆ ದರ್ಬೆ ವೃತ್ತದಿಂದ ಜನಜಾಗೃತಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಹೊರಟು ಮುಖ್ಯ ರಸ್ತೆಯಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಬಳಿಕ ಖಾಸಗಿ ಬಸ್ ನಿಲ್ದಾಣದಲ್ಲಿ ಸಭೆ ನಡೆಯಲಿದೆ. ಈ ಜನಜಾಗೃತಿ ಸಭೆಗೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಸಭೆಯಲ್ಲಿ ಹಿಂದೂ ನಾಯಕರಾದ ಮಹೇಶ್ ಶೆಟ್ಟಿ ತಿಮರೋಡಿ, ಪ್ರವೀಣ್ ವಾಲ್ಕೆ ಸಹಿತ ಸಂತೋಷ್ ರಾವ್ ಪ್ರಕರಣದಲ್ಲಿ ಅವರ ಪರವಾಗಿ ವಾದ ಮಂಡಿಸಿದ ವಕೀಲರಾದ ನವೀನ್ ಹಾಗೂ ಮೋಹಿತ್ ಕುಮಾರ್, ಸೌಜನ್ಯ ತಾಯಿ ಕುಸುಮಾವತಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಅನಿಲ್ ಬೆಳ್ತಂಗಡಿ, ಅಭಿನವ ಭಾರತ ಮಿತ್ರ ಮಂಡಳಿ ಪ್ರವರ್ತಕರಾದ ಧನ್ಯ ಕುಮಾರ್ ಬೆಳಂದೂರು, ನವೀನ್ ಕುಲಾಲ್ ಉಪಸ್ಥಿತರಿದ್ದರು.