ಬೆಂಗಳೂರು: ದಿನದಿಂದ ದಿನಕ್ಕೆ ಬೆಂಗಳೂರಿನ ಜನರ ಜೀವನಾಡಿಯಾಗ್ತಿರೋ ಮೆಟ್ರೋ ಈಗ ಮತ್ತಷ್ಟು ಜನಸ್ನೇಹಿಯಾಗ್ತಿದೆ. ಈಗಾಗಲೇ ಮೆಟ್ರೋ ಕಾರ್ಡ್ ಪರಿಚಯಿಸಿರೋ ನಮ್ಮ ಮೆಟ್ರೋದಲ್ಲಿ ಇನ್ಮುಂದೇ ಎನ್‌ಸಿಎಂಸಿ ಕಾರ್ಡ್ (NCMC (National Common Mobility Card) ಸಿಗಲಿದೆ.
ಬೆಂಗಳೂರಿನ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಸೋಮವಾರದಿಂದ ಆ.21 ರಿಂದ ಎನ್ ಸಿಎಂ ಸಿ ಕಾರ್ಡ್ ಪ್ರಯಾಣಿಕರ ಬಳಕೆಗೆ ಸಿಗಲಿದೆ. ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಮಾರಾಟವನ್ನು ಸೋಮವಾರದಿಂದ ಆರಂಭಿಸುವುದಾಗಿ ನಮ್ಮ ಮೆಟ್ರೋ ಘೋಷಿಸಿದೆ.
NCMC ಕಾರ್ಡ್ ಅಂದ್ರೆ ಏನು? ಅನ್ನೋದನ್ನು ನೋಡೋದಾದರೇ, ಇದರ ಫುಲ್ ಫಾರ್ಮ್ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್. ಒನ್ ನೇಷನ್ ಒನ್ ಕಾರ್ಡ್ ಕಾನ್ಸೆಪ್ಟ್ ನಲ್ಲಿ ಸಿದ್ಧವಾಗಿರೋ ಲೂಪ್ ಕಾರ್ಡ್ ಇದಾಗಿದೆ. ಈ ಕಾರ್ಡ್ ನ್ನ ದೇಶದ ಎಲ್ಲಾ ಸಾರಿಗೆ ವ್ಯವಸ್ಥೆಯಲ್ಲಿ ಬಳಸಬಹುದಾಗಿದೆ. ಸಾರಿಗೆ ವ್ಯವಸ್ಥೆ ಮಾತ್ರವಲ್ಲ, ರಿಟೇಲ್ ಅಂಗಡಿ, ಪೆಟ್ರೋಲ್ ಬಂಕ್ , ಶಾಪಿಂಗ್ ಗಾಗಿಯೂ ಬಳಸಬಹುದಾಗಿದೆ.
ಇನ್ನು NCMC ಕಾರ್ಡ್ (Metro NCMC Card) ಪಡೆಯುವುದು ಹೇಗೆ ಅನ್ನೋದಾದರೇ, ಪ್ರಯಾಣಿಕರು, ಗ್ರಾಹಕರು ವಿವರಗಳನ್ನು (kyc) NAMMAMETROAGSINDI.COM ವೆಬ್ ಸೈಟ್ ಅಥವಾ BMRCL RBL Bank NCMC ಮೊಬೈಲ್ ಅಪ್ಲಿಕೇಶನ್ ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಸಂಖ್ಯೆ/ ನೋಂದಾಯಿತ ಸಂಖ್ಯೆಯನ್ನು ಟಿಕೆಟ್ ಕೌಂಟರ್ ನಿರ್ವಾಹಕರಿಗೆ ತಿಳಿಸಬೇಕು. ಕಾರ್ಡ್ ಗೆ 50 ರೂಪಾಯಿ ದರವಿದ್ದು, ಅತ್ಯಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗಲಿದೆ. ಇನ್ನೂ ರೂಪೇ ಕಾಮನ್ ಮೊಬಿಲಿಟಿ ಕಾರ್ಡ್ ಗಳು ಎಲ್ಲ RBL ಬ್ಯಾಂಕ್ ಶಾಖೆಗಳಲ್ಲೂ ತೆಗೆದುಕೊಳ್ಳಬಹುದಾಗಿದೆ.
ಬೆಂಗಳೂರಿನ ಅಂದಾಜು 6 ಲಕ್ಷಕ್ಕೂ ಅಧಿಕ ಮೆಟ್ರೋ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದ್ದು, ಇದರೊಂದಿಗೆ ಬ್ಯುಸಿನೆಸ್, ಶಿಕ್ಷಣ , ಆರೋಗ್ಯ ಸೇರಿದಂತೆ ಹಲವು ಕಾರಣಕ್ಕೆ ನಗರಕ್ಕೆ ಆಗಮಿಸುವ ದೇಶದ ನಾನಾಭಾಗದ ಜನರಿಗೂ ಈ ಒನ್ ಕಾರ್ಡ್ ಬಳಕೆ ನೆರವಾಗಲಿದೆ. ಮಾರ್ಚ್ ನಲ್ಲಿ ವೈಟ್ ಫಿಲ್ಡ್ – ಕೆ.ಆರ್.ಪುರಂ ಮೆಟ್ರೋಗೆ ಚಾಲನೆ ನೀಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಎನ್ ಸಿ ಎಂಸಿ ಕಾರ್ಡ್ ಬಳಸಿ ಪ್ರಧಾನಿ ಮೋದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಈಗ ಜನರು ಕೆವೈಸಿ ಅಪ್ಡೇಟ್ ಮಾಡೋ ಮೂಲಕ ಎನ್ ಸಿಎಂಸಿ ಕಾರ್ಡ್ ಪಡೆಯಬಹುದಾಗಿದೆ.