ಪುತ್ತೂರು: ಪುತ್ತೂರು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ವೈದ್ಯರ ನಿರ್ಲಕ್ಷವೆಂದು ಆರೋಪಿಸಿ ವೈದ್ಯರನ್ನು ತಕ್ಷಣ ಬಂಧಿಸಬೇಕು ಮತ್ತು ಸರಕಾರ ನೊಂದ ಕುಟುಂಬಕ್ಕೆ ರೂ. 25ಲಕ್ಷ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿ ದ.ಕ.ದಲಿತ್ ಸೇವಾ ಸಮಿತಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆ ಮುಂದೆ ಆ.24ರಂದು ಪ್ರತಿಭಟನೆ ನಡೆಸುವುದಾಗಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಳ್ಯ ತಾಲೂಕಿನ ಶ್ರೀಜಿತ್ ಎಂಬ ಯುವಕನನ್ನು ಹೊಟ್ಟೆನೋವೆಂದು ಪುತ್ತೂರು ಚೇತನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತನಿಗೆ ಸರ್ಜರಿ ಮಾಡಿದ ಸಮಯ ವೆಂಟಿಲೇಟರ್ ಇಲ್ಲದೆ ಬೇರೆ ಆಸ್ಪತ್ರೆಗೆ ಕಳುಹಿಸಿಕೊಡುವ ಸಮಯದಲ್ಲಿ ಶ್ರೀಜಿತ್ ಮೃತಪಟ್ಟಿದ್ದಾರೆ. ಈ ಕುರಿತು ವೈದ್ಯಾಧಿಕಾರಿಯ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ವೈದ್ಯರನ್ನು ಪೊಲೀಸರು ಬಂಧಿಸಿಲ್ಲ. ಹಾಗಾಗಿ ವೈದ್ಯರನ್ನು ಬಂಧಿಸಬೇಕು ಮತ್ತು ಸರಕಾರದಿಂದ ನೊಂದ ಕುಟುಂಬಕ್ಕೆ ರೂ.25ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮೃತ ಶ್ರೀಜಿತ್ ಅವರ ಚಿಕ್ಕಪ್ಪ ಚಂದ್ರಶೇಖರ್, ಸಂಬಂಧಿಕೆ ಸುಮತಿ ಬೆಟ್ಟಂಪಾಡಿ, ದಲಿತ್ ಸೇವಾ ಸಮಿತಿಯ ಸುಂದರ ಪಾಟಾಜೆ, ಧನಂಜಯ್ ನಾಯ್ಕ್ ಬಲ್ನಾಡು ಉಪಸ್ಥಿತರಿದ್ದರು.