ಪುತ್ತೂರು: ಬೆಟ್ಟಂಪಾಡಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಕಾಲೇಜಿನ ಕಾನೂನು ಅರಿವು – ನೆರವು ಘಟಕದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಧನಂಜಯ ಬಿ.ಸಿ. ‘ಡ್ರಗ್ಸ್ ಮುಕ್ತ ಸಮಾಜ’ ಎಂಬ ವಿಷಯದ ಬಗ್ಗೆ ಮಾತನಾಡಿ, ಮದ್ಯಪಾನ, ಧೂಮಪಾನ ಮತ್ತು ಡ್ರಗ್ಸ್‌ಗಳಂತಹ ಸಾಮಾಜಿಕ ಪಿಡುಗುಗಳಿಗೆ ಯುವ ಜನಾಂಗ ದಾಸರಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗುವುದರ ಜತೆಗೆ ದೇಶ ದುರ್ಬಲಗೊಳಿಸುತ್ತಿದ್ದಾರೆ ಎಂದರು. ಇಂತಹ ಪರಿಸ್ಥಿತಿಯನ್ನು ತೊಡೆದು ಹಾಕಿ ಸ್ವಚ್ಛ ದೇಶವನ್ನಾಗಿಸುವಲ್ಲಿ ಯುವ ಪೀಳಿಗೆಯ ಪಾತ್ರ ಮುಖ್ಯವಾಗಿದೆ. ದೇಶಾದ್ಯಂತ ಡ್ರಗ್ಸ್, ಮದ್ಯಪಾನ, ಧೂಮಪಾನ ಮಾಲಿನ್ಯಗಳ ಮುಕ್ತ ಸ್ವಚ್ಛ ವ್ಯಕ್ತಿತ್ವ, ಸ್ವಚ್ಛ ಕ್ಯಾಂಪಸ್, ಸ್ವಚ್ಛ ಸಮಾಜಕ್ಕಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ವಕೀಲ ಶಶಿಕುಮಾರ್ ಕಲ್ಲೂರಾಯ ‘ಪೋಕ್ಸೋ ಕಾಯಿದೆ’ ಕುರಿತು ಮಾತನಾಡಿ, ಮಕ್ಕಳು ಈ ದೇಶದ ಅಮೂಲ್ಯ ಆಸ್ತಿ. ಅವರ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಮಕ್ಕಳ ಹಕ್ಕುಗಳ ಹಾಗೂ ಶಿಕ್ಷಣ ಹಕ್ಕು ಕಾಯಿದೆ ಸೇರಿದಂತೆ ಮಕ್ಕಳ ಸುರಕ್ಷತೆಗೆ ಈಚೆಗೆ 2012ರ ಪೋಕ್ಸೋ ಕಾಯಿದೆ ಜಾರಿಗೆ ತರಲಾಗಿದೆ. ಮೂಲಭೂತ ಹಕ್ಕುಗಳ ರಕ್ಷಣೆ, ಅವರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳು ಕೂಡ ರಕ್ಷಣೆಯ ಬಗ್ಗೆ ವೈಯುಕ್ತಿಕ ಕಾಳಜಿ ವಹಿಸುವಂತೆ ಸಲಹೆ ನೀಡಿದರು. ಪೋಕ್ಸೋ ಕಾಯ್ದೆ ಬಗ್ಗೆ ವಿವರಿಸಿದ ಅವರು ನಂತರ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಪ್ರಾಸ್ತವಿಕವಾಗಿ ಮಾತನಾಡಿದರು. ಬೆಟ್ಟಂಪಾಡಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.