ಮಂಗಳೂರು : ಹ್ಯಾಕರ್ಗಳ ಮೋಸಕ್ಕೆ ಸಿಲುಕಿ ಸೌದಿ ಅರೆಬಿಯದಲ್ಲಿ ಉದ್ಯೋಗದಲ್ಲಿದ್ದ ಕಡಬದ ವ್ಯಕ್ತಿಯೊಬ್ಬರು ಜೈಲು ಪಾಲಾಗಿದ್ದು, ಅವರ ಮನೆಯವರು ಮಗನ ಬಿಡುಗಡೆಗಾಗಿ ಮೊರೆ ಇಟ್ಟಿದ್ದಾರೆ.
ಕಡಬ ತಾಲೂಕಿನ ಊತ್ತೂರು ಗ್ರಾಮದ ಮುಜೂರು ದಿ. ಕೆಂಚಪ್ಪ ಗೌಡ ಹಾಗೂ ಹೇಮಾವತಿ ದಂಪತಿಯ ಪುತ್ರ ಚಂದ್ರಶೇಖರ್ ಎಂ. ಕೆ. ರಿಯಾದ್ನಲ್ಲಿರುವ(ಸೌದಿ ಅರೇಬಿಯಾ) ಅಲ್ಪಾನ ಸೆರಾಮಿಕ್ಸ್ ಎಂಬ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಹ್ಯಾಕರ್ ಗಳ ಮೋಸದಾಟಕ್ಕೆ ಸಿಲುಕಿದ ಅವರು ಇದೀಗ ಜೈಲಿನಲ್ಲಿದ್ದಾರೆ. 2022ರ ನವೆಂಬರ್ನಿಂದ ರಿಯಾದ್ನ ಜೈಲಿನಲ್ಲಿದ್ದು, ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಚಂದ್ರಶೇಖರ್ ಕಳೆದ ವರ್ಷ ಮೊಬೈಲ್ ಮತ್ತು ಸಿಮ್ ಖರೀದಿಗಾಗಿ ರಿಯಾದ್ನಲ್ಲಿರುವ ಮೊಬೈಲ್ ಅಂಗಡಿಯೊಂದಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಚಂದ್ರಶೇಖರ್ ಅವರಿಂದ 2ಬಾರಿ ಥಂಬ್ ಪಡೆಯಲಾಗಿ ಒಂದು ವಾರದ ಬಳಿಕ ಆ ದೂರವಾಣಿ ಸಂಖ್ಯೆಗೆ ಅರಬಿಕ ೧)) ಭಾಷೆಯಲ್ಲಿ ಸಂದೇಶವೊಂದು ಬಂದಿದ್ದು ಸಂದೇಶವನ್ನು ಕ್ಲಿಕ್ ಮಾಡಿದ ಚಂದ್ರಶೇಖರ್ ಬಳಿ ಸಿಮ್ ಕುರಿತು ಮಾಹಿತಿ ಹಾಗೂ ಒಟಿಪಿ ಕೇಳಿದ್ದಾರೆ. ಒಟಿಪಿ ಹೇಳಿದ ಚಂದ್ರಶೇಖರ್ ಬಳಿಕ ತಮ್ಮ ಕೆಲಸಕ್ಕೆ ತೆರಳಿದ್ದಾರೆ. ಇದರ ಜತೆ ತಮ್ಮ ನಿಶ್ಚಿತಾರ್ಥ ಮತ್ತಿತರ ಕೆಲಸದಲ್ಲಿ ಮಗ್ನರಾಗಿದ್ದರು. ಈ ನಡುವೆ ಒಂದು ದಿನ ಪೊಲೀಸರು ಏಕಾಏಕಿ ಚಂದ್ರಶೇಖರ್ ಅವರನ್ನು ಬಂಧಿಸಿದ್ದು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗುತ್ತದೆ. ಚಂದ್ರಶೇಖರ್ ಅವರಿಗೆ ತಿಳಿಯದಂತೆ ಅಲ್ಲಿ ಬ್ಯಾಂಕ್ವೊಂದರಲ್ಲಿ ಅವರ ಹೆಸರಿನಲ್ಲಿ ಅಕೌಂಟ್ ತೆರೆದಿದ್ದು ಮತ್ತು ಅದೇ ದೇಶದ ಮಹಿಳೆಯೊಬ್ಬರ 22 ಸಾವಿರ ದಿರಮ್ ಈ ಖಾತೆಗೆ ಜಮೆಯಾಗಿ ಕೂಡಲೇ ಅದರಿಂದ ಬೇರೆ ಯಾವುದೋ ದೇಶಕ್ಕೆ ವರ್ಗಾವಣೆಯಾಗಿತ್ತು. ಹಣ ಕಳೆದುಕೊಂಡ ಮಹಿಳೆಯು ಚಂದ್ರಶೇಖರ್ ಖಾತೆಗೆ ಜಮೆಯಾಗಿರುವುದನ್ನು ಗಮನಿಸಿ ಅವರ ವಿರುದ್ಧ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಚಂದ್ರಶೇಖರ್ ಅವರನ್ನು ಬಂಧಿಸಿದ್ದಾರೆ.
ಮಗನನು ಬಿಡಿಸಿಕೊಳಲು ಕಳೆದ 8 ತಿಂಗಳಿಂದ ತಂದೆ-ತಾಯಿ ಒದ್ದಾಡುತ್ತಿದ್ದಾರೆ. ಇತ್ತ ಚಂದ್ರಶೇಖರ್ ದುಡಿಯುತ್ತಿದ್ದ ರಿಯಾದ್ ಕಂಪೆನಿಯೂ ಈ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೆ ಅನ್ಯಾಯ ಮಾಡಿದೆ ಎಂದು ಚಂದ್ರಶೇಖರ್ ಅವರ ತಾಯಿ ಕಣ್ಣೀರಿಡುತ್ತಿದ್ದಾರೆ.
ಚಂದ್ರಶೇಖರ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲು ಕೇಂದ್ರ ಸರಕಾರ, ವಿದೇಶಾಂಗ ಸಚಿವರು ಒತ್ತಡ ಹಾಕಬೇಕೆಂದು ಆಗ್ರಹಿಸಿ ದ.ಕ.ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಸಲಾಯಿತು.