ಪುತ್ತೂರು: ಸ್ವಾತಂತ್ರ್ಯ ನಮಗೆ ಸುಮ್ಮನೆ ದೊರೆತದ್ದಲ್ಲ. ಬದಲಿಗೆ ಅದು ಹಲವರ ರಕ್ತ ತರ್ಪಣ, ಬಲಿದಾನಗಳ ಪ್ರತಿಫಲ. ಹೀಗಾಗಿ ಅವರ ಸ್ಮರಣೆ ಶಿಕ್ಷಣದ ಜೊತೆ ಜೊತೆಯಲ್ಲಿ ಸಾಗಬೇಕು ಎಂದು ಅಂಬಿಕಾ ಶಿಕ್ಷಣ ಸಂಸ್ಥೆಯ ಉಪನ್ಯಾಸಕ, ವಾಗ್ಮಿ ಆದರ್ಶ ಗೋಖಲೆ ಹೇಳಿದರು.
ಬಪ್ಪಳಿಗೆ ಅಂಬಿಕಾ ವಿದ್ಯಾಸಂಸ್ಥೆಯಲ್ಲಿ ನಡೆದ “ದೇಶ ವಿಭಜನೆಯ ಭಯಾನಕ ಸ್ಮರಣ ದಿನ” ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ವಿಭಜಿಸುವ ಎಷ್ಟೇ ಪ್ರಯತ್ನಗಳು ನಡೆದರೂ ಅದು ಸಾಧ್ಯವಾದದ್ದು ಮಾತ್ರ ಸ್ವಾತಂತ್ರ್ಯ ದೊರೆತ ನಂತರವೇ ಎನ್ನುವುದು ವಿಷಾದಕರ ಸಂಗತಿ. ಅದರ ಪರಿಣಾಮವನ್ನು ದೇಶ ಇಂದಿಗೂ ಅನುಭವಿಸುತ್ತಿದೆ ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕುಮಾರಿ ಪ್ರಿಯಾಶ್ರೀ ಕೆ. ಎಸ್ ವಂದಿಸಿದರು.