ಆಸ್ಪತ್ರೆಗೆ ದಾಖಲಾದ ಬಾಲಕ ಶಸ್ತ್ರಚಿಕಿತ್ಸೆ ಬಳಿಕ ಮೃತ್ಯು : ವೈದ್ಯರ ಬೇಜವಾಬ್ದಾರಿ ಆರೋಪ |ಆಸ್ಪತ್ರೆ ಮುಂಭಾಗ ಮೃತದೇಹ ಇಟ್ಟು ದಲಿತ ಸಂಘಟನೆಯಿಂದ ಪ್ರತಿಭಟನೆ

ಪುತ್ತೂರು; ಅಪ್ರಾಪ್ತ ಬಾಲಕನೋರ್ವ ಕರುಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಹೊಟ್ಟೆನೋವು ಉಂಟಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಬಾಲಕನ ಸಾವಿಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯ ವೈದ್ಯರುಗಳೇ ಕಾರಣ ಎಂದು ಆರೋಪಿಸಿ ಮೃತ ಬಾಲಕನ ಶವವನ್ನು ಆಸ್ಪತ್ರೆಯ ಮುಂದಿಟ್ಟು ದಲಿತ ಸಂಘಟನೆ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಪ್ರತಿಭಟನಾ ನಿರತ ದಲಿತ ಸಂಘಟನೆ ಮೃತ ಬಾಲಕನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು, ಜತೆಗೆ ಬೇಜವಾಬ್ದಾರಿ ವಹಿಸಿ ಬಾಲಕನ ಸಾವಿಗೆ ಕಾರಣವಾದ ವೈದ್ಯರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತು. ಮೂರು ದಿನಗಳೊಳಗೆ ನ್ಯಾಯ ಸಿಗದಿದ್ದರೆ ಪುತ್ತೂರು ನಗರ ಪೊಲೀಸ್ ಠಾಣೆ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಸುಳ್ಯ ತಾಲೂಕಿನ ಪೈಚಾರು ಗ್ರಾಮದ ಶಾಂತಿನಗರ ನಿವಾಸಿ ಸಂಜೀವ ಮತ್ತು ಪ್ರೇಮ ದಂಪತಿ ಪುತ್ರ ಶ್ರೀಜಿತ್(17) ಮೃತಪಟ್ಟ ಬಾಲಕನಾಗಿದ್ದು,ಈತನನ್ನು ಶನಿವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಆತನ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನಲೆಯಲ್ಲಿ ಸೋಮವಾರ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುವಂತೆ ಪುತ್ತೂರಿನ ಖಾಸಗಿ ಆಸ್ಪತ್ರೆಯವರು ತಿಳಿಸಿದ್ದಾರೆ. ತಕ್ಷಣ ಆತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟ ಕುರಿತು ಘೋಷಣೆ ಮಾಡಿದ್ದರು. ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರು ಸಾವಿಗೆ ಕಾರಣ ಎಂದು ಆರೋಪಿಸಲಾಗಿತ್ತು.



































 
 

ಮಂಗಳವಾರ ಸಂಜೆ ಮೃತಪಟ್ಟ ಬಾಲಕನ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯಿಂದ ಅಂಬುಲೆನ್ಸ್ ನಲ್ಲಿ ತಂದು ಅಂಬುಲೆನ್ಸ ನ್ನು ಪುತ್ತೂರು ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಿ ಪ್ರತಿಭಟನೆ ಆರಂಭಿಸಿದ ಮೃತನ ಸಂಬಂಧಿಕರು ಮತ್ತು ವಿವಿದ ದಲಿತ ಸಂಘಟನೆಗಳ ಕಾರ್ಯಕರ್ತರು ವೈದ್ಯರ ಮತ್ತು ಇಲ್ಲಿನ ವ್ಯವಸ್ಥೆಯ ನಿರ್ಲಕ್ಷದಿಂದಾಗಿಯೇ ಬಾಲಕನ ಸಾವು ಸಂಭವಿಸಿದೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ದ.ಕ. ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ, ಬಡಕುಟುಂಬದ ಅನಾರೋಗ್ಯ ಪೀಡಿತನಾದ ತಂದೆ ಮತ್ತು ತಾಯಿಯನ್ನು ಸಲಹಬೇಕಾಗಿದ್ದ ಬಾಲಕ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾವಿಗೀಡಾಗುವಂತಾಗಿದೆ. ಹಣಕ್ಕೋಸ್ಕರ ಬಡ ಜೀವಗಳನ್ನು ಬಲಿಕೊಡುವ ವ್ಯವಸ್ಥೆಗಳಾಗುತ್ತಿದ್ದು, ಈ ಹಿಂದೆಯೂ ವೈದ್ಯರ ನಿರ್ಲಕ್ಷ್ಯಕ್ಕೆ ಮಗುವೊಂದು ಬಲಿಯಾಗಿದೆ. ಹೊಟ್ಟೆನೋವಿನ ಹಿನ್ನಲೆಯಲ್ಲಿ ಬಂದ ಮಹಿಳೆಯೊಬ್ಬರನ್ನು ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಪೀಡಿಸಿದ ಘಟನೆ ನಡೆದಿದೆ. ಇದು ನಿಲ್ಲಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪುತ್ತೂರು ನಗರಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಕೇವಲ ಪ್ರಕರಣ ದಾಖಲಿಸಿದರೆ ಸಾಲದು. ಪೊಲೀಸರು ತಕ್ಷಣ ತಪ್ಪಿತಸ್ತ ವೈದ್ಯರನ್ನು ಬಂಧಿಸುವ ಕೆಲಸ ಮಾಡಬೇಕು. ಈ ಕುಟುಂಬಕ್ಕೆ ಸರ್ಕಾರ ರೂ.25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು ಉಪವಿಭಾಗಾದಿಕಾರಿ, ತಹಶೀಲ್ದಾರ್ ಇಲ್ಲವೇ ಶಾಸಕರು ಬಂದು ನಮ್ಮ ಮನವಿ ಸ್ವೀಕರಿಸಿ ನ್ಯಾಯ ಒದಗಿಸಬೇಕು. ಅಲ್ಲಿ ತನಕ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ನಗರಠಾಣೆಯ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ಅವರು ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇವೆ. ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಿದರು. ಅವರ ಮಾತಿನಿಂದ ತೃಪ್ತರಾಗದ ಪ್ರತಿಭಟನಾಕಾರರು ಅಧಿಕಾರಿಗಳು ಆಗಮಿಸಿ ನಮ್ಮ ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶಿವಶಂಕರ್ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.

ಅಂಬೇಡ್ಕರ್ ತತ್ವರಕ್ಷಣಾಸಮಿತಿ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ, ದಲಿತ ಮುಖಂಡರಾದ ಅಭಷೇಕ್ ಬೆಳ್ಳಿಪ್ಪಾಡಿ, ಅಣ್ಣಪ್ಪ ಕಾರೆಕ್ಕಾಡು, ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರಶೇಖರ್ ಯು ವಿಟ್ಲ, ಜಿಲ್ಲಾ ಸಂಚಾಲಕ ಧನಂಜಯ ಬಲ್ನಾಡು, ವಿವಿಧ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪೊಲೀಸರು ಬಿಗುಬಂದೋಬಸ್ತು ವ್ಯವಸ್ಥೆ ಮಾಡಿದ್ದರು.

ವೈದ್ಯರ ಸ್ಪಷ್ಟನೆ:

ಶ್ರೀಜಿತ್‌ಗೆ ಒಂದು ವಾರದಿಂದ ಆಗಾಗ ಕರುಳು ಸಂಬಂಧಿತ ಕಾರಣದಿಂದ ಹೊಟ್ಟೆನೋವು ಬಂದಿತ್ತು. ಎರಡು ದಿನಗಳಿಂದ ತೀವ್ರ ಸ್ವರೂಪಕ್ಕೆ ಬದಲಾಗಿ ವಾಂತಿ ಸಮಸ್ಯೆ ಕಂಡುಬಂತು. ಈ ಹಿನ್ನಲೆಯಲ್ಲಿ ಆತ ಸುಳ್ಯದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಆಗಬೇಕು ಎಂದು ಸೂಚಿಸಿದ ಹಿನ್ನಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಬಂದು ಶನಿವಾರ ಮಧ್ಯರಾತ್ರಿ 1 ಗಂಟೆಯ ವೇಳೆಗೆ ಇಲ್ಲಿಗೆ ದಾಖಲಿಸಲಾಗಿತ್ತು. ಆತನಿಗೆ ದೊಡ್ಡಕರುಳು ಸುತ್ತಿಕೊಳ್ಳುವ ( ಸಿಗ್ಮಾಯಿಡ್ ವಾಲ್ಯೂಲಸ್-ಗ್ಯಾಂಗ್ರೀನ್ )ಸಮಸ್ಯೆ ಇದ್ದ ಹಿನ್ನಲೆಯಲ್ಲಿ ಭಾನುವಾರ ಸಂಜೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ 10 ಗಂಟೆಗಳ ತನಕ ಯಾವುದೇ ಸಮಸ್ಯೆ ಇರಲಿಲ್ಲ. ಬಳಿಕ ವಿಪರೀತ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಪರಿಣಾಮ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಮಂಗಳೂರಿಗೆ ಒಯ್ಯಲು ಸೂಚಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಬ್ಯಾಕ್ಟಿರಿಯಾ ರಕ್ತಕ್ಕೆ ಸೇರಿಕೊಂಡ ಕಾರಣ ಈ ಸಾವು ಸಂಭವಿಸಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಡಾ.ಪ್ರಕಾಶ್ ಮತ್ತು ಡಾಜೆ.ಸಿ ಅಡಿಗ ಸ್ಪಷ್ಟನೆ ನೀಡಿದ್ದಾರೆ.

ಮೃತ ಶ್ರೀಜಿತ್ ಅವರ ದೊಡ್ಡಪ್ಪ ಕೃಷ್ಣ ಜಿ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top