ಒಂದು ವರ್ಷದಲ್ಲಿ ಒಟ್ಟು ದೇಣಿಗೆಯ ಶೇ.72.17 ಬಿಜೆಪಿಗೆ
ಹೊಸದಿಲ್ಲಿ : ಬಿಜೆಪಿ ಈ ವರ್ಷ ಬಿಜೆಪಿಯು ಚುನಾವಣಾ ಟ್ರಸ್ಟ್‌ಗಳಿಂದ 351.50 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ. ಇದು ರಾಜಕೀಯ ಪಕ್ಷಗಳಿಗೆ ಸಂದಾಯವಾದ ಒಟ್ಟು ದೇಣಿಗೆಯ ಶೇ.72.17 ಆಗುತ್ತದೆ. ಬಿಜೆಪಿ 2021-22ನೇ ಸಾಲಿನಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ಅತಿ ಹೆಚ್ಚು ದೇಣಿಗೆಗಳನ್ನು ಸ್ವೀಕರಿಸಿದೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ತಿಳಿಸಿದೆ.
ಕೆಲ ಹೊಸ ಪಕ್ಷಗಳಿಗೆ ಹೋಲಿಕೆ ಮಾಡಿದರೆ, ದೇಶದ ಹಳೆ ಪಕ್ಷವಾದ ಕಾಂಗ್ರೆಸ್ ಅತಿ ಕಡಿಮೆ ದೇಣಿಗೆ ಸ್ವೀಕರಿಸಿದೆ. ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಕೆಸಿಆರ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್), ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ)ಯಂತಹ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್‌ಗೆ ಸಿಕ್ಕಿದ ಡೊನೇಶನ್ ತುಂಬ ಕಡಿಮೆ.
ಚುನಾವಣಾ ಟ್ರಸ್ಟ್ (Electoral trusts)ಗಳು ಕಾರ್ಪೊರೇಟ್ ಘಟಕಗಳು ಮತ್ತು ವ್ಯಕ್ತಿಗಳಿಂದ ಕ್ರಮಬದ್ಧವಾದ ರೀತಿಯಲ್ಲಿ ದೇಣಿಗೆ ಅಥವಾ ಕೊಡುಗೆಗಳನ್ನು ಸ್ವೀಕರಿಸಲು ರಾಜಕೀಯ ಪಕ್ಷಗಳಿಗಾಗಿ ರಚಿಸಲಾದ ಲಾಭರಹಿತ ಸಂಸ್ಥೆಗಳಾಗಿವೆ. ಈ ಟ್ರಸ್ಟ್‌ಗಳು ಚುನಾವಣೆಗೆ ಸಂಬಂಧಿಸಿದ ವೆಚ್ಚಗಳಿಗಾಗಿ ನಿಧಿಯ ಬಳಕೆಯಲ್ಲಿ ಪಾರದರ್ಶಕತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿವೆ. ಆಡಳಿತವನ್ನು ಬಲಪಡಿಸಲು ಮತ್ತು ಪಾರದರ್ಶಕತೆ ಹೆಚ್ಚಿಸುವಲ್ಲಿ ಎಡಿಆರ್ ಗಮನ ಹರಿಸುತ್ತಿದ್ದು, ಚುನಾವಣಾ ಟ್ರಸ್ಟ್‌ಗಳ ಮೂಲಕ ದೇಣಿಗೆಗಳ ಕುರಿತು ವಾರ್ಷಿಕ ವರದಿಗಳನ್ನು ಪ್ರಕಟಿಸುತ್ತದೆ.
ಎಸ್‌ಪಿ, ಎಎಪಿ, ವೈಎಸ್‌ಆರ್-ಕಾಂಗ್ರೆಸ್, ಕಾಂಗ್ರೆಸ್, ಶಿರೋಮಣಿ ಅಕಾಲಿದಳ (ಎಸ್‌ಎಡಿ), ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ದ್ರಾವಿಡ ಮುನ್ನೇತ್ರ ಕಾಳಗಂ (ಡಿಎಂಕೆ) ಸೇರಿದಂತೆ ಎಂಟು ಇತರ ಪಕ್ಷಗಳು ಒಟ್ಟು 95.56 ಕೋಟಿ ರೂಪಾಯಿ ದೇಣಿಗೆ ಪಡೆದಿವೆ.
ಬಿಜೆಪಿಗೆ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ 336.50 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಎಬಿ ಜನರಲ್ ಎಲೆಕ್ಟೋರಲ್ ಟ್ರಸ್ಟ್ ಮತ್ತು ಸಮಾಜ್ ಎಲೆಕ್ಟೋರಲ್ ಟ್ರಸ್ಟ್ 2021-22ರ ಹಣಕಾಸು ವರ್ಷದಲ್ಲಿ ಬಿಜೆಪಿಗೆ ತಮ್ಮ ಒಟ್ಟು ಆದಾಯದಲ್ಲಿ ಕ್ರಮವಾಗಿ 10 ಕೋಟಿ ಮತ್ತು 5 ಕೋಟಿ ರೂಪಾಯಿ ವಂತಿಗೆಯಾಗಿ ನೀಡಿವೆ.
ಕಾಂಗ್ರೆಸ್ 18.44 ಕೋಟಿ ದೇಣೀಗೆ ಗಳಿಸಿದ್ದರೆ, ಸಮಾಜವಾದಿ ಪಕ್ಷ 27 ಕೋಟಿ ಗಳಿಸಿದೆ. ಎಎಪಿ ಮತ್ತು ವೈಎಸ್ಆರ್-ಕಾಂಗ್ರೆಸ್ ಕ್ರಮವಾಗಿ 21.12 ಕೋಟಿ ಮತ್ತು 20 ಕೋಟಿ ದೇಣಿಗೆ ಪಡೆದಿವೆ.