ಪುತ್ತೂರು: ಆತ್ಮಕಥನ ‘ದೀವಿಗೆ’ ನಿಜಕ್ಕೂ ದಾರಿದೀಪ’ವೆನಿಸಿದ್ದು, ಡಾ.ಪೀಟರ್ ವಿಲ್ಸನ್ ಪ್ರಭಾಕರ್‌ರವರ ಆತ್ಮಚರಿತ ಉತ್ತಮವಾಗಿ ಸರಳವಾಗಿ, ಸುಸೂತ್ರವಾಗಿ ಎಲ್ಲಿ, ಏನು ಹೇಳಬೇಕು ಅಲ್ಲಿ ಹೇಳುತ್ತಾ ನಿರರ್ಗಳವಾಗಿ ಮೂಡಿ ಬಂದಿದ್ದು, ಈ ಕೃತಿ ಓದುಗನಿಗೆ ಓದಿಸಿಕೊಂಡು ಹೋಗುವ ಕೃತಿಯಾಗಿದೆ ಎಂದು ಕಾಸರಗೋಡು ಪ್ರಾಧ್ಯಾಪಕರಾದ ಡಾ.ರಾಧಾಕೃಷ್ಣ ಬೆಳ್ಳೂರು ಹೇಳಿದರು.
ಅವರು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ಜ್ಞಾನಗಂಗಾ ಪುಸ್ತಕ ಮಳಿಗೆ ಜಂಟಿ ಆಶ್ರಯದಲ್ಲಿ ನಡೆದ ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಮೇಳ ಹಾಗೂ ಸಾಹಿತ್ಯ ವೈಭವ ಕಾರ್ಯಕ್ರಮದಲ್ಲಿ ಸುಧಾನ ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್ ಮೆಂಟ್ ಸ್ಟಡೀಸ್ ಅಧ್ಯಕ್ಷ ಡಾ ಪೀಟರ್ ವಿಲ್ಸನ್ ಪ್ರಭಾಕರ್ ಅವರ ಆತ್ಮಕಥನ “ದೀವಿಗೆ” ಕೃತಿಯ ಲೋಕಾರ್ಪಣಾ ಸಮಾರಂಭದಲ್ಲಿ ಕೃತಿ ಅನಾವರಣಗೊಳಿಸಿ ಮಾತನಾಡಿದರು.
ಆತ್ಮಚರಿತ್ರೆ ಹಾಗೂ ಜೀವನಚರಿತ್ರೆ ಯವಾಗಲೂ ಪರಿಪೂರ್ಣತೆ ಆಗಿರಲು ವ್ಯಕ್ತಿಯ ಸಮಗ್ರ ಬದುಕಿನ ಒಂದು ನಿರ್ದಿಷ್ಟ ಭಾಗ ಆತ್ಮಚರಿತ್ರೆಯಾಗಿದೆ. ಆತ್ಮಚರಿತ್ರೆ ಅಥವಾ ಜೀವನ ಚರಿತ್ರೆ ಬರೆಯುವ ವ್ಯಕ್ತಿ ಬದುಕಿನೊಳಗೆ ತುಂಬಿಕೊಂಡಿರುವ ಅನುಭವಗಳು ಮತ್ತು ಅಲ್ಲಿ ಬಂದು ಹೋಗಿರುವ ಸಂಗತಿಗಳು ಘಟನೆಗಳನ್ನು ಆಯ್ದು ಬರೆಯುವುದಾಗಿದೆ. ಜತೆಗೆ ಒಂದು ವ್ಯಕ್ತಿಯು ಮತ್ತೊಂದು ವ್ಯಕ್ತಿಯನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದರು.
ಹಿರಿಯ ಸಾಹಿತಿ ಪ್ರೊ.ವಿ.ಬಿ.ಅರ್ತಿಕಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾನು ವಿವೇಕಾನಂದ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕನಾಗಿದ್ದ ಸಂದರ್ಭದಲ್ಲಿ ತನ್ನಲ್ಲಿದ್ದ ಸಾಹಿತ್ಯದ ಗೀಳನ್ನು ಇತರ ಸಹ ಪ್ರಾಧ್ಯಾಪಕರಿಗೆ ಅಂಟಿಸಿಕೊಳ್ಳುತ್ತಿದ್ದೆ. ಮುಖ್ಯವಾಗಿ ಡಾ| ಪೀಟರ್ ವಿಲ್ಸನ್‌ರವರು ಸಾಹಿತ್ಯದ ಗೀಳನ್ನು ಧನಾತ್ಮಕವಾಗಿ ಬಳಸಿಕೊಂಡವರಾಗಿದ್ದಾರೆ. ಬಹಳ ಸೈಲೆಂಟ್ ವ್ಯಕ್ತಿಯಾಗಿರುವ ಪೀಟರ್ ಪ್ರಭಾಕರ್‌ರವರು ಹೆಚ್ಚು ಹುಚ್ಚು ಕೆಚ್ಚುತನದಿಂದ ಮಾತನಾಡುತ್ತಿರಲಿಲ್ಲ. ಅವರದ್ದು ಗಳಸ್ಯ ಕಂಠಸ್ಯ ಎಂಬಂತೆ ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡುವುದು ಆಗಿತ್ತು ಎಂದರು.
ಕೃತಿ ಪರಿಚಯ ಮಾಡಿದ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ್ ಪೂಜಾರಿ ಮಾತನಾಡಿ, ಯಾವುದೇ ಉತ್ತೇಕ್ಷೆ ಇಲ್ಲದೆ ವಿಷಯಾಧಾರಿತವಾಗಿ ಈ ಕೃತಿ ಮೂಡಿ ಬಂದಿದೆ. ನಮ್ಮ ಕಿರಿಯರಿಗೆ ಮುಂದಿನ ತಮ್ಮ ಜೀವನದ ಪಾತ್ರ ಏನು ಎಂಬ ಪರಿಚಯದೊಂದಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಈ ಕೃತಿ ಪೂರಕವಾಗಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಉಮೇಶ್ ನಾಯಕ್ ಕರ್ನಾಟಕ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್‌ಮಾತನಾಡಿ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಪೀಟರ್ ಪ್ರಭಾಕರ್- ರವರ ಜ್ಞಾನ ಭಂಡಾರ ಎಂಬುದು ವಿಶ್ವಕೋಶವೇ ಆಗಿದೆ. ಸಾಹಿತ್ಯ ಚರಿತ್ರೆಯಲ್ಲಿ ಮೇರು ವ್ಯಕ್ತಿತ್ವದ ಪೀಟರ್ ಪ್ರಭಾಕರ್‌ರವರು ನಮ್ಮೊಂದಿಗೆ ಇರುವುದು ನಮ್ಮ ಭಾಗ್ಯವಾಗಿದೆ. ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಎಂಬ ಉನ್ನತ ಹುದ್ದೆಯನ್ನು ನಿರ್ವಹಿಸಿದ ಅನುಭವ ಪೀಟದ್ ಪ್ರಭಾಕರ್‌ರವರರಾಗಿದ್ದು ಓರ್ವ ಅಧ್ಯಯನಶೀಲ ವ್ಯಕ್ತಿತ್ವ ಅವರದ್ದು ಎಂದರು.
ಸುದಾನ ವಸತಿಯುತ ಶಾಲಾ ಸಂಚಾಲಕ ರೆ ವಿಜಯ ಹಾರ್ವಿನ್ ಮಾತನಾಡಿದರು. ಸುಳ್ಯ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಹರಿಣಿ ಪುತ್ತೂರಾಯ ಕೃತಿಕಾರರ ಪರಿಚಯ ಮಾಡಿದರು. ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ವಿವೇಕಾನಂದ ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ| ಎಚ್.ಜಿ ಶ್ರೀಧರ್ ಸ್ವಾಗತಿಸಿದರು. ಸುದಾನ ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್‌ವಂದಿಸಿದರು. ಶಿಕ್ಷಕಿ ಕವಿತಾ ಅಡೂರು ಕಾರ್ಯಕ್ರಮ ನಿರ್ವಹಿಸಿದರು.
ಇತಿಹಾಸ ಪ್ರಾಧ್ಯಾಪಕರಾಗಿರುವ ಪ್ರೊ.ವಿ.ಬಿ.ಅರ್ತಿಕಜೆ, ತುಕಾರಾಂ ಪೂಜಾರಿ, ಪುಂಡಿಕ್ಕಾ ಗಣಪಯ್ಯ ಭಟ್ ಹಾಗೂ ನಾನು ವಿವಿಧ ಕಡೆಗಳಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇವೆ. ಅಭ್ಯಾಸ ಮಾಡುವ ಸಂದರ್ಭದಲ್ಲಿ ನಾವು ನಮ್ಮ ಸ್ವಂತ ಆಸಕ್ತಿಯಿಂದ ಈ ಕ್ಷೇತ್ರಕ್ಕೆ ಸಕಾರಾತ್ಮಕವಾಗಿ ಬೆರೆತು ಗಳಿಸಿದ ಮೆಟ್ಟಿನಿಂತು ಮುಂದುವರಿದ ಪರಿ ಬೇರೆ ಬೇರೆ ಕೃತಿಗಳನ್ನು ಮಾಡಲು ಪ್ರೇರೇಪಣೆಯಾಯಿತು.
ಡಾ| ಪೀಟಸ್ ಎಲ್ಸನ್ ಪ್ರಭಾಕರ್, ‘ದೀವಿಗೆ’ ಕೃತಿಕಾರರು