ಆದಿಚುಂಚನಗಿರಿ: ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಕುರಿತಂತೆ ಇದೀಗ ರಾಜ್ಯವ್ಯಾಪಿಯಾಗಿ ಚಳವಳಿಯ ರೂಪದಲ್ಲಿ ಪ್ರತಿಭಟನೆ ಹಬ್ಬುತ್ತಿದ್ದು, ಇನ್ನೊಂದು ಬೆಳವಣಿಗೆ ಆಗಿದೆ. ಸೌಜನ್ಯಾಳ ತಾಯಿ ಕುಸುಮಾವತಿ, ತಂದೆ ಚಂದಪ್ಪ ಗೌಡ ಮತ್ತು ಸೌಜನ್ಯಗೆ ನ್ಯಾಯ ಕೊಡಿಸಲು ಕಂಕಣ ಬದ್ಧವಾಗಿ ನಿಂತಿರುವ ಮಹೇಶ್ ಶೆಟ್ಟಿ ತಿಮರೋಡಿಯವರು ಭಾನುವಾರ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಭೇಟಿ ನೀಡಿದ್ದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳನ್ನು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯನ ಮನೆಯವರು ಭೇಟಿ ಮಾಡಿ ಧರ್ಮಸ್ಥಳದ ಸೌಜನ್ಯ ಗೌಡ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸ್ವಾಮೀಜಿಯವರಿಗೆ ನೀಡಿದ್ದಾರೆ. ಅಲ್ಲದೆ, ಒಕ್ಕಲಿಗ ಗೌಡರ ಹುಡುಗಿ ಸೌಜನ್ಯ ಗೌಡಳ ಸಾವಿಗೆ ನ್ಯಾಯ ಕೊಡಿಸಲು ಸ್ವಾಮೀಜಿಯವರ ಬೆಂಬಲ ಕೋರಲಾಯಿತು. ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸಂಪೂರ್ಣ ಮಾಹಿತಿ ನೀಡಿ ಪೂಜ್ಯ ಗುರುಗಳ ಬೆಂಬಲ ಕೋರಲಾಯಿತು.
ರಾಜ್ಯದಾದ್ಯಂತ ಬಹುಸಂಖ್ಯಾತ ಒಕ್ಕಲಿಗ ಸಮುದಾಯದ ಜನರು ಇದ್ದು, ಇನ್ನೂ ಹೆಚ್ಚಿನ ಜನರಿಗೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಮಾಹಿತಿ ಇಲ್ಲ. ಈಗಾಗಲೇ ಮೈಸೂರು ಬೆಂಗಳೂರಿನ ಹಲವು ಕಡೆಗಳಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆಗೆ ಪ್ರತಿಭಟನೆಯ ಮೂಡಿಬಂದ ಹಿನ್ನೆಲೆಯಲ್ಲಿ ಈ ಹೈ ಪ್ರೊಫೈಲ್ ಕೇಸು ಪ್ರಚಾರ ಪಡೆದುಕೊಳ್ಳುತ್ತಿದೆ. ಸೌಜನ್ಯ ಹತ್ಯೆ ಪ್ರಕರಣ ಒಂದು ಬಹುಮುಖ್ಯ ಮೈಲುಗಲ್ಲಾಗಿದೆ. ಆಕೆಯ ಹತ್ಯೆಯ ನಂತರ ಇದೀಗ ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿರುವ 460 ಕ್ಕೂ ಹೆಚ್ಚು ಅಸಹಜ ಸಾವುಗಳ ತನಿಖೆಗೆ ಪ್ರತಿಭಟನೆಗಳು ಜೋರಾಗಿ ಶುರುವಾಗಿವೆ.
ರಾಜ್ಯದಲ್ಲಿ ಒಕ್ಕಲಿಗ ಸಮಾಜ ಬಲಿಷ್ಠವಾಗಿದೆ. ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಒಕ್ಕಲಿಗ ಸಮಾಜ ಒಗ್ಗಟ್ಟಾಗಿದ್ದು, ಈ ಬಾರಿ ತಮ್ಮ ಸಮುದಾಯದ ಹುಡುಗಿ ಸೌಜನ್ಯ ಗೌಡರಿಗೆ ನ್ಯಾಯ ಕೊಡಿಸಲು ಒಕ್ಕಲಿಗ ಸಮುದಾಯದ ಒಕ್ಕೊರಳ ಬೆಂಬಲವನ್ನು ಕೋರಲಾಗುತ್ತಿದೆ. ಆರೋಪಿಗಳು ತೀರಾ ಬಲಿಷ್ಠರು ಆಗಿರುವ ಕಾರಣ, ಸ್ವ ಜಾತೀಯ ಸಂಘಟನೆಗಳು ಅಲ್ಲದೆ ಎಲ್ಲ ಜಾತಿಯ – ಧರ್ಮದ ಸಹಾಯವನ್ನು ಕೂಡ ಕೇಳಲಾಗುತ್ತಿದೆ. ಇದೀಗ ಸೌಜನ್ಯ ಹೋರಾಟ ಒಂದು ಕ್ರಾಂತಿ ಹೋರಾಟವಾಗಿ ರೂಪುಗೊಳ್ಳುತ್ತಿದ್ದು, ಅದು ಧರ್ಮತೀತವಾಗಿ ಹಲವು ಸಂಘ ಸಂಸ್ಥೆಗಳು ಹೋರಾಟಕ್ಕೆ ಇಳಿದಿವೆ. ಇಂತಹ ಸಂದರ್ಭದಲ್ಲಿ ಒಕ್ಕಲಿಗ ಸಮಾಜ ಮುಂದೆ ನಿಂತು ಎಲ್ಲಾ ರೀತಿಯಿಂದಲೂ ಹೋರಾಟಕ್ಕೆ ಭುಜ ನೀಡಬೇಕು, ಹೋರಾಟಕ್ಕೆ ಬೇಕಾದ ಬಲ ಮತ್ತು ಮಾರ್ಗದರ್ಶನವನ್ನು ರಾಜ್ಯದ ಬಲಿಷ್ಠ ಒಕ್ಕಲಿಗ ಸಂಘಟನೆಗಳು ಮತ್ತು ಸ್ವಾಮಿಜಿಯವರು ನೀಡಬೇಕು ಎನ್ನುವುದು ಸೌಜನ್ಯ ಪೋಷಕರ ಬೇಡಿಕೆಯಾಗಿದೆ.