ಪುತ್ತೂರು: ಎಂಬಿಬಿಎಸ್ ಪದವೀಧರರ ಕೌನ್ಸಿಲಿಂಗ್ ಮೂಲಕ ಅಗತ್ಯ ಸಂಖ್ಯೆಯ ವೈದ್ಯರ ನೇಮಕ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.
ಶುಕ್ರವಾರ ಪುತ್ತೂರು ತಾಲೂಕು ವೈದ್ಯಾಧಿಕಾರಿ ಕಚೇರಿಯಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಕೌನ್ಸಿಲಿಂಗ್ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಶೀಘ್ರ ನೇಮಕಾತಿ ಪೂರ್ಣಗೊಳ್ಳಳಲಿದೆ ಎಂದ ಅವರು, ಸರಕಾರಿ ವೈದ್ಯರಿಗೆ ಉತ್ತಮ ವೇತನ ನೀಡಲಾಗುವುದು. ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇಮಕದಲ್ಲಿ ಸಮಸ್ಯೆಯಿದೆ. ಬೇಕಾದಷ್ಟು ನುರಿತರು ಸರಕಾರಿ ವ್ಯವಸ್ಥೆಗೆ ಸಿಗುತ್ತಿಲ್ಲ ಎಂದರು.
ರಾಜ್ಯದ 15 ಸರಕಾರಿ ಆಸ್ಪತ್ರೆಗಳಿಗೆ ಎಂಆರ್‌ಐ, 5 ಆಸ್ಪತ್ರೆಗಳಿಗೆ ಸಿ.ಟಿ. ಸ್ಕ್ಯಾನ್ ನೀಡಲಾಗುತ್ತಿದೆ. ಪುತ್ತೂರು ಸರಕಾರಿ ಆಸ್ಪತ್ರೆ ತಾಲೂಕು ಆಸ್ಪತ್ರೆಗಿಂತ ಮೇಲ್ಮಟ್ಟದ ಸಾರ್ವಜನಿಕ ಆಸ್ಪತ್ರೆಯಾಗಿರುವ ಕಾರಣ ಇಲ್ಲಿಗೆ ಎರಡನ್ನೂ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಸಚಿವರು ಯಶಸ್ವಿನಿ ಆರೋಗ್ಯ ವಿಮೆ ಅಂಗೀಕರಿಸಲು ದ.ಕ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ನಿರಾಕರಣೆ ಮಾಡುತ್ತಿರುವ ಬಗ್ಗೆ ಸಹಕಾರಿ ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು. ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಮೂಲಕ ನೋಂದಣಿ ಮಾಡಿದವರಿಗೆ ನೀಡುವ ಆರೋಗ್ಯ ವಿಮೆಯಾಗಿದ್ದು, ಸಹಕಾರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದರು.
ಪೌಷ್ಟಿಕ ಸಮೀಕ್ಷೆಗೆ ಕ್ರಮ :
ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ ಮನೆ ಮನೆಗಳಲ್ಲಿ ನಡೆಯುತ್ತಿದೆ. ಇದರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಲು ನಿರಾಕರಿಸಿದ್ದಾರೆ. ಸಮೀಕ್ಷೆ ಪೂರ್ಣಗೊಳಿಸುವುದು ಅನಿವಾರ್ಯವಾದ ಕಾರಣ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಆಶಾ ಕಾರ್ಯಕರ್ತೆಯರ ಜತೆ ಕಿರಿಯ ಆರೋಗ್ಯ ಸಹಾಯಕಿಯರನ್ನೂ ಸೇರಿಸಿಕೊಳ್ಳಲಾಗುವುದು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಂಜೆ ಬಳಿಕವೂ ಕಾರ್ಯನಿರ್ವಹಿಸಿದರೆ ಉತ್ತಮ ಎಂಬುದು ಸರಕಾರದ ಗಮನದಲ್ಲಿದೆ. ಇದಕ್ಕೆ ಹೆಚ್ಚುವರಿ ವೈದ್ಯರು ಮತ್ತು ಸಿಬ್ಬಂದಿಗಳ ಅಗತ್ಯವಿರುವ ಕಾರಣ ಸದ್ಯಕ್ಕೆ ಅನುಷ್ಠಾನ ಸಾಧ್ಯವಿಲ್ಲ. ಎಂದವರು ಹೇಳಿದರು.
ಶಾಸಕ ಅಶೋಕ್ ರೈ, ಜಿಪಂ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಆನಂದ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್, ಆರೋಗ್ಯ ಇಲಾಖೆಯ ವಿಭಾಗೀಯ ಸಹ ನಿರ್ದೇಶಕಿ ಡಾ.ರಾಜೇಶ್ವರಿ, ಎ.ಸಿ. ಗಿರೀಶ್ ನಂದನ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಪುತ್ತೂರಾಯ ಮತ್ತಿತರರು ಉಪಸ್ಥಿತರಿದ್ದರು.
ಸಭೆಯ ಮೊದಲು ಸಚಿವರು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ಶಾಸಕರೊಂದಿಗೆ ಭೇಟಿ ನೀಡಿದರು. ಡಯಾಲಿಸಿಸ್ ಸೆಂಟರ್ ಮತ್ತು ವಾರ್ಡ್‌ಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವವ ಜತೆ ಮಾತನಾಡಿ, ಆಸ್ಪತ್ರೆಯ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಪುತ್ತೂರು ಆಸ್ಪತ್ರೆ ಮೇಲ್ದರ್ಜೆಗೆ
125 ವರ್ಷಗಳ ಇತಿಹಾಸವಿರುವ ಪುತ್ತೂರು ಸಾರ್ವಜನಿಕ ಆಸ್ಪತ್ರೆಯನ್ನು 150 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ಪ್ರಸ್ತಾಪವಿದೆ. ಈ ಬಗ್ಗೆ ಈಗಾಗಲೇ ಅಂದಾಜು ಪಟ್ಟಿ ತಯಾರಿಸಲಾಗಿದೆ. ಸಮುದಾಯ ಆಸ್ಪತ್ರೆಯೂ ಸೇರಿದಂತೆ ರಾಜ್ಯದ 25 ಆಸ್ಪತ್ರೆಗಳು ಇದೇ ರೀತಿ ಮೇಲ್ದರ್ಜೆಗೇರುವ ಪಟ್ಟಿಯಲ್ಲಿದೆ. ಈ ಬಗ್ಗೆ ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಸರಕಾರಿ ಮೆಡಿಕಲ್ ಕಾಲೇಜು ನಿರ್ಧಾರ ಸಿಎಂ ಅಂಗಳದಲ್ಲಿ
ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡುವ ವಿಚಾರ ಮುಖ್ಯಮಂತ್ರಿಗಳ ಅಂಗಳದಲ್ಲಿದೆ. ಅವರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವರು ಹೇಳಿದರು. ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಗುರಿ ಸರಕಾರದಲ್ಲಿದೆ. ಮಂಗಳೂರಿನಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು ಸಾಕಷ್ಟಿರುವ ಕಾರಣ ದ.ಕ.ಜಿಲ್ಲೆಯ ಕೋಟ ಪುತ್ತೂರಿಗೆ ಬರಲಿದೆ. ಇಲ್ಲಿನ ಬೇಡಿಕೆಯನ್ನು ತಿಳಿಸುತ್ತೇನೆ. ಅಂತಿಮ ನಿರ್ಧಾರ ಸಿಎಂ ತೆಗೆದುಕೊಳ್ಳುತ್ತಾರೆ ಎಂದರು.
ಮೊಟ್ಟೆ ವಿತರಣೆಗೆ ವಿಭಾಗ ಮಟ್ಟದ ಟೆಂಡರ್ :
ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳಿಗೆ ನೀಡುವ ಮೊಟ್ಟೆ ಅನೇಕ ಕಡೆ ಕೊಳೆತ ಕಾರಣ ಅದನ್ನು ಸೇವಿಸಿ ಆರೋಗ್ಯ ಸಮಸ್ಯೆಯಾಗಿದೆ. ಇದು ಸರಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಮೊಟ್ಟೆ ವಿತರಣೆಯ ಟೆಂಡರ್‌ನ್ನು ವಿಭಾಗ ಮಟ್ಟದಲ್ಲಿ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.