ಪುತ್ತೂರು: “ಎನನ್ ಬದ್ಕಾಯ ಮಗ…” ತನ್ನ ಅನಾರೋಗ್ಯದ ಸಮಯದಲ್ಲಿ ನೆರವಾದ ಶಾಸಕ ಸಂಜೀವ ಮಠಂದೂರು ಅವರಿಗೆ ಮಹಿಳೆಯೊಬ್ಬರು ಕೃತಜ್ಞತೆ ಸಲ್ಲಿಸಿದ್ದ ಭಾವುಕ ಕ್ಷಣವಿದು.
ಕೆಲ ದಿನಗಳ ಹಿಂದೆ ಪುರಭವನದಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ಮಠಂದೂರು ಅವರು ಹೊರಬರುತ್ತಿದ್ದಂತೆ, ಮಹಿಳೆಯೊಬ್ಬರು ಶಾಸಕರ ಕೈಹಿಡಿದು ತನ್ನ ಒಡಲಿನ ಮಾತುಗಳನ್ನು ಹೊರಗೆಡವಿದ ಬಗೆ ಇದು.
ಕಳೆದ ಕೆಲ ದಿನಗಳಿಂದ ಬೇರೆ ಬೇರೆ ಸಾಲುಗಳನ್ನು ಹೊದ್ದುಕೊಂಡು, ಶಾಸಕರ ಫೊಟೋವೊಂದು ವೈರಲ್ ಆಗಿತ್ತು. ಹೆಚ್ಚಿನ ಮಂದಿ ತಮ್ಮ ಸಂದೇಹವನ್ನು ತೋಡಿಕೊಂಡಿದ್ದರೂ ಕೂಡ. ಮಹಿಳೆಯ ಕಣ್ಣಲ್ಲಿ ಕೃತಜ್ಞತಾ ಭಾವವೊಂದು ಹೊರಸೂಸುತ್ತಿದ್ದುದು ಬಿಟ್ಟರೆ, ಬೇರೇನೂ ಅರ್ಥವಾಗುತ್ತಿರಲಿಲ್ಲ. ಆದ್ದರಿಂದ ನ್ಯೂಸ್ ಪುತ್ತೂರು ಫೊಟೋದ ಹಿಂದಿನ ತಾತ್ಪರ್ಯವನ್ನು ಹುಡುಕಿದಾಗ, ಮಹಿಳೆಯ ಭಾವುಕ ಕಣ್ಣೋಟದ ಹಿಂದಿನ ಕಥೆ ವ್ಯಕ್ತವಾಗಿದೆ.
ಕೆಲ ಸಮಯಗಳ ಹಿಂದೆ ಫೊಟೋದಲ್ಲಿರುವ ಮಹಿಳೆ, ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಂತಹ ಸಂದರ್ಭದಲ್ಲಿ ಆಕೆಯ ಹಿನ್ನೆಲೆ ಗಮನಿಸಿದೇ, ನೆರವಿನ ಹಸ್ತಾ ಚಾಚಿದ್ದರು. ತಮ್ಮ ಕೈಲಾದ ನೆರವು ನೀಡಿ, ಸಾಂತ್ವನ ಹೇಳಿದ್ದರು.
ಇನ್ನೊಂದು ಸಂದರ್ಭ – ಇದೇ ಮಹಿಳೆಯ ಮನೆಗೆ ಸೂಕ್ತ ದಾಖಲಾತಿಗಳು ಇರಲಿಲ್ಲ. ಆಗಲೂ ಇವರು, ಶಾಸಕರ ಕಚೇರಿಯ ಕದ ತಟ್ಟಿದ್ದರು. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಆಕೆಯ ಮನೆಗೆ ಅಗತ್ಯ ದಾಖಲಾತಿ, ಹಕ್ಕುಪತ್ರವನ್ನು ನೀಡುವ ಕೆಲಸ ಸೂಕ್ತ ಸಂದರ್ಭದಲ್ಲಿ ನಡೆದಿತ್ತು.
ಶಾಸಕ ಸಂಜೀವ ಮಠಂದೂರು ಅವರಿಂದ ತನಗಾದ ಉಪಕಾರ ಸ್ಮರಣೆಯನ್ನು, ಮಹಿಳೆ ಈ ರೀತಿಯಾಗಿ ತೋರ್ಪಡಿಸಿದ್ದರು. ಯಾರೋ ಒಬ್ಬರು ಆ ಕ್ಷಣ ತೆಗೆದ ಫೊಟೋದಿಂದ ಶಾಸಕರ ಕಾರ್ಯವೈಖರಿ ಬೆಳಕಿಗೆ ಬಂದಿದೆ. ಸ್ವತಃ ಮಠಂದೂರು ಈ ವಿಚಾರವನ್ನು ಎಲ್ಲೂ ಹೇಳಿಕೊಂಡಿಲ್ಲ. ಫೊಟೋವೇ ಎಲ್ಲವನ್ನು ಹೇಳಿದೆ.