ದೆಹಲಿ: ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ಸರಕಾರಿ ನೌಕರರು ನಡೆಸುವ ರ್‍ಯಾಲಿ ಯಲ್ಲಿ ಸರಕಾರಿ ನೌಕರರು ಭಾಗವಹಿಸದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಪ್ರತಿಭಟನೆ ಸೇರಿದಂತೆ ಯಾವುದೇ ರೀತಿಯ ಮುಷ್ಕರದಲ್ಲಿ ಭಾಗಿಯಾದರೆ ಆ ನೌಕರರು ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದು ವೇತನ ಕಡಿತದ ಜೊತೆಗೆ, ಸೂಕ್ತ ಶಿಸ್ತು ಕ್ರಮವನ್ನು ಒಳಗೊಂಡಿರುತ್ತದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆಗಾಗಿ ಜಂಟಿ ವೇದಿಕೆ ಮತ್ತು ರಾಷ್ಟ್ರೀಯ ಜಾಯಿಂಟ್ ಕೌನ್ಸಿಲ್ ಆಫ್ ಆಕ್ಷನ್ ಬ್ಯಾನರ್ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳ ನೌಕರರು ಮುಂದಿನ ಗುರುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ರ್‍ಯಾಲಿಯನ್ನು ಆಯೋಜಿಸಿದ್ದಾರೆ.
ಹೊಸ ಪಿಂಚಣಿ ಯೋಜನೆಯು ಏಪ್ರಿಲ್ 1, 2003 ರಂದು ಜಾರಿಗೆ ಬಂದಿತು. ಜನವರಿ ವರೆಗೆ 23,65,693 ಕೇಂದ್ರ ಸರ್ಕಾರಿ ನೌಕರರು ಮತ್ತು 60,32,768 ರಾಜ್ಯ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದಾರೆ
ಮುಷ್ಕರಕ್ಕೆ ಹೋಗಲು ನೌಕರರಿಗೆ ಅಧಿಕಾರ ನೀಡುವ ಯಾವುದೇ ಶಾಸನಬದ್ಧ ನಿಬಂಧನೆ ಇಲ್ಲ. ಮುಷ್ಕರ ನಡೆಸುವುದು ನೀತಿ ನಿಯಮಗಳ ಅಡಿಯಲ್ಲಿ ಗಂಭೀರ ದುಷ್ಕೃತ್ಯವಾಗಿದೆ ಮತ್ತು ಸರ್ಕಾರಿ ನೌಕರರ ದುಷ್ಕೃತ್ಯವನ್ನು ಕಾನೂನಿನ ಪ್ರಕಾರ ವ್ಯವಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗಳಲ್ಲಿ ಒಪ್ಪಿಕೊಂಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನೌಕರರ ಗೈರುಹಾಜರಿಗಾಗಿ ವೇತನ ಮತ್ತು ಭತ್ಯೆಗಳನ್ನು ಸ್ವೀಕರಿಸಲಾಗುವುದಿಲ್ಲ ಮತ್ತು ನೌಕರರನ್ನು ಮುಷ್ಕರಕ್ಕೆ ಹೋಗದಂತೆ ತಡೆಯಲು ಪ್ರತಿ ಸಚಿವಾಲಯದ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ.