ಪುತ್ತೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಯಾರು ಬೇಕಾದರೂ, ಯಾವಾಗ ಬೇಕಾದರೂ ತನಿಖೆ ನಡೆಸಬಹುದು ಎಂದು ಸಿಡಿಪಿಒ ಸ್ಪಷ್ಟನೆ ನೀಡಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ಅವರು ಬುಧವಾರ ಇಲಾಖೆಯಲ್ಲಿ ಅವ್ಯವಹಾರ ನಡೆದಿದ ಎಂಬ ದೂರಿನ ಹಿನ್ನಲೆಯಲ್ಲಿ ಇಲಾಖೆಗೆ ದಿಢೀರ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಇಲಾಖಾ ಅಧಿಕಾರಿ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಶಾಸಕರು ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡಿದ್ದರು. ಇದು ಸತ್ಯಕ್ಕೆ ದೂರವಾಗಿದ್ದು, ಧಾರಾಳವಾಗಿ ತನಿಖೆ ನಡೆಸಬಹುದು ಎಂದಿದ್ದಾರೆ.
ನಮಗೆ ಬೇರೆ ಬೇರೆ ಕಾರ್ಯಕ್ರಮಗಳು, ಒತ್ತಡಗಳು ಇರುತ್ತದೆ. ಅಲ್ಲದೆ ಪುತ್ತೂರು ಹಾಗೂ ಕಡಬಕ್ಕೂ ಚಾರ್ಜ್ ಇದೆ. ಹಾಗಂತ ಶಾಸಕರು ಕರೆ ಮಾಡಿದ ತಕ್ಷಣ ಅವರಿಗೆ ನಾವು ಸಿಗಬೇಕೆಂದಿಲ್ಲ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಬಂದ ವರದಿಯಿಂದ ನಮ್ಮ ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ನಮ್ಮ ಇಲಾಖೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಇಲಾಖೆಯಲ್ಲಿ ಯಾವುದೇ ಅವ್ಯವಹಾರ ನಡೆದರೆ ನಮ್ಮ ಗಮನಕ್ಕೆ ತರಬೇಕು ಎಂದು ನಾನೇ ಹೇಳಿಕೆ ನೀಡಿದ್ದೇನೆ. ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಬಂದ ವರದಿಯಿಂದ ನಮ್ಮ ಇಲಾಖೆಯವರಿಗೆ ತುಂಬಾ ನೋವಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.