ಪುತ್ತೂರು: ಮಾಡನ್ನೂರು ಗ್ರಾಮದ ಅಮ್ಮಿನಡ್ಕ ಎಂಬಲ್ಲಿ ವಿಷ್ಣು ಕಲ್ಲೂರಾಯ ಎಂಬವರ ಮನೆಯಂಗಳದ ಉಗ್ರಾಣದಿಂದ 12 ಕ್ವಿಂಟಾಲ್ ಅಡಿಕೆ ಕಳವು ಪ್ರಕರಣದ ಆರೋಪಿಗಳನ್ನು ಸಂಪ್ಯ ಪೊಲೀಸರು ಎರಡೇ ವಾರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಡನ್ನೂರ್ ಗ್ರಾಮದ ಕಾವು ಅಮ್ಮಿನಡ್ಕ ಉಜ್ರುಗುಳಿ ನಿವಾಸಿ ಕಿರಣ್ ಕುಮಾರ್ (27) ಮತ್ತು ಸಂತೋಷ್ ಯು (30) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತ ಆರೋಪಿಗಳಿಬ್ಬರಿಂದ ಕೃತ್ಯಕ್ಕೆ ಬಳಸಿದ ಮಾರುತಿ ವ್ಯಾನ್ ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾಡನ್ನೂರ್ ಗ್ರಾಮದ ಅಮ್ಮಿನಡ್ಕ ಎಂಬಲ್ಲಿ ವಿಷ್ಣು ಕಲ್ಲೂರಾಯ ಅವರು ಜು.7 ರಂದು ಮಗನ ಮನೆಗೆ ಹೋಗಿ ಆ.3ರಂದು ಪುತ್ತೂರಿಗೆ ಮರಳಿದ ವೇಳೆ ಮನೆಯಂಗಳದ ಉಗ್ರಾಣದಲ್ಲಿ 10 ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಇರಿಸಲಾಗಿದ್ದ ಸುಮಾರು 12 ಕ್ವಿಂಟಾಲ್ ಅಡಿಕೆ ಮತ್ತು ಹುಲ್ಲು ತೆಗೆಯುವ ಮೆಷಿನ್ ಕಳವಾಗಿತ್ತು. ಈ ಕುರಿತು ದೂರು ನೀಡಿದ ಹಿನ್ನಲೆಯಲ್ಲಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಅವರ ಮಾರ್ಗದರ್ಶನದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರ ಪೋ ನಿರೀಕ್ಷಕ ರವಿ ಬಿ.ಎಸ್, ಪುತ್ತೂರು ಗ್ರಾಮಾಂತರ ಠಾಣೆಯ – ಧನಂಜಯ ಬಿ.ಸಿ, ಎ.ಎಸ್.ಐ ಮುರುಗೇಶ್, ಸಿಬ್ಬಂದಿಗಳಾರ ಬಾಲಕೃಷ್ಣ, ಅದ್ರಾಮ, ಪ್ರವೀಣ್ ರೈ, ಲೋಕೇಶ್, ಜಗದೀಶ್, ಮುನಿಯ ನಾಯ್ಕ, ಚಾಲಕ ಯೋಗೀಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.