ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪೋಷಕರು, ಸಮಿತಿ ಸಮನ್ವಯ ಸಭೆ

ಪುತ್ತೂರು: ಮಕ್ಕಳ ಮೂಲಕ ಪೋಷಕರಲ್ಲೂ ವೈಜ್ಞಾನಿಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಂದ ಪ್ರಾತ್ಯಕ್ಷಿತಗೊಂಡ ವಿಜ್ಞಾನದ ದೈನಂದಿನ ಬದುಕಿಗೆ ಸಂಬಂಧಿಸಿದ ಪ್ರಯೋಗಗಳನ್ನು ನಮಗೂ ತಿಳಿಸುವುದು ಮಕ್ಕಳ ಪ್ರಯತ್ನ ಶ್ಲಾಘನೀಯ ಎಂದು ಪೋಷಕಿ ಆಶಾ ಹೇಳಿದರು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ನಡೆದ ವಿಭಾಗವಾರು ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಕ್ಕಳಿಂದ ಶ್ಲೋಕ, ಅಮೃತ ವಚನ, ಮಂಕುತಿಮ್ಮನ ಕಗ್ಗ, ದೇಶಭಕ್ತಿ ಗೀತೆ, ಕನ್ನಡ ಮತ್ತು ಆಂಗ್ಲ ಭಾಷೆಯ ಭಾಷಣ ಹಾಗೂ ವಿಜ್ಞಾನ ಪ್ರಾತ್ಯಕ್ಷಿಕೆಗಳು ಪ್ರಸ್ತುತಗೊಂಡವು. ಪೋಷಕರೊಂದಿಗೆ ನಡೆದ ಸಂವಾದದಲ್ಲಿ ಮಕ್ಕಳ ಶೈಕ್ಷಣಿಕ ಹಾಗೂ ವಾರ್ಷಿಕ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಅನಂತರ ಪ್ರಥಮ ರೂಪಣಾತ್ಮಕ ಮೌಲ್ಯಮಾಪನದ ಉತ್ತರ ಪತ್ರಿಕೆ ಹಾಗೂ ಪ್ರಗತಿಪತ್ರವನ್ನು ಪರಿಶೀಲಿಸಲಾಯಿತು.



































 
 

ಪ್ರತೀ ವಿಭಾಗದಿಂದ ಶಾಲಾ ಶಿಕ್ಷಕ-ರಕ್ಷಕ ಸಮಿತಿ, ಮಾತೃಭಾರತಿ, ಅನ್ನಪೂರ್ಣ ಸಮಿತಿ ಹಾಗೂ  ವಿವೇಕ ಸಂಜೀವಿನಿ ಸಮಿತಿಗಳಿಗೆ ಇಬ್ಬರು ಪೋಷಕರನ್ನು ಆಯ್ಕೆ ಮಾಡಲಾಯಿತು. ಬಳಿಕ ನಡೆದ ಸಮಿತಿ ಸಮನ್ವಯ ಸಭೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ, ಶಾಲೆಗಳಲ್ಲಿ ಪೋಷಕರ ಪಾತ್ರ ಮಹತ್ತರವಾದುದು. ಒಬ್ಬ ವ್ಯಕ್ತಿ ತನಗೆ ಸಂಬಂಧಿಸಿದ ಸಂಸ್ಥೆಯನ್ನು, ವಿಷಯವನ್ನು ತನ್ನದೆಂದು ಭಾವಿಸಿಕೊಳ್ಳಬೇಕು. ಆಗ ಮಾತ್ರ ಕೆಲಸ ಮಾಡಲು ಮನಸ್ಸು ಶಕ್ತಿ ಬರುತ್ತದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿಯಬೇಕು. ಜವಾಬ್ದಾರಿಯಿಂದ ವಿಮುಖರಾಗಬಾರದು. ಸಂಘಟನಾತ್ಮಕವಾಗಿ ಮಾಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು’. ಎಂದರು.

ಬಳಿಕ ನಡೆದ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮದಲ್ಲಿ  ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಜಯಂತ ಗೌಡ ಕೆ,  ಉಪಾಧ್ಯಕ್ಷರಾಗಿ ಆಶಾ.ಕೆ, ಜೊತೆ ಕಾರ್ಯದರ್ಶಿಯಾಗಿ ಯುವರಾಜ ಕೆ ಆಯ್ಕೆಯಾದರು. ಮಾತೃಭಾರತಿ ಅಧ್ಯಕ್ಷೆಯಾಗಿ ಮಂಗಳ ಗೌರಿ, ಉಪಾಧ್ಯಕ್ಷೆಯಾಗಿ ಪ್ರೀತಿಕಲಾ, ಜೊತೆಕಾರ್ಯದರ್ಶಿಯಾಗಿ ಮಂಜುಳಾ ಆಯ್ಕೆಯಾದರು.

ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ರಮೇಶ್ ಪಜಿಮಣ್ಣು ಉಪಸ್ಥಿತರಿದ್ದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಗಳ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಶಿಕ್ಷಕ ಚಂದ್ರಶೇಖರ ಸುಳ್ಯಪದವು ನಡೆಸಿಕೊಟ್ಟರು. ವೇದಿಕೆಯಲ್ಲಿ ವಿವೇಕ ಸಂಜೀವಿನಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಮಾತೃಭಾರತಿಯ ನಿಕಟಪೂರ್ವ ಅಧ್ಯಕ್ಷೆ ಉಷಾ ಮಹೇಶ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ನಳಿನಿ ವಾಗ್ಲೆ, ವಿವೇಕ ಸಂಜೀವಿನಿ ಸಮಿತಿಯ ಸಂಯೋಜಕಿ ವೀಣಾಸರಸ್ವತಿ, ಅನ್ನಪೂರ್ಣ ಸಮಿತಿ ಸಂಯೋಜಕ ಚಂದ್ರಶೇಖರ ಸುಳ್ಯಪದವು ಉಪಸ್ಥಿತರಿದ್ದರು. ಶಿಕ್ಷಕಿ ವೀಣಾಸರಸ್ವತಿ ಪ್ರಾರ್ಥಿಸಿದರು. ರಾಮ ನಾಯ್ಕ್ ಎಂ ಸ್ವಾಗತಿಸಿ, ಉಮಾ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲೆಯ ವಿದ್ಯಾರ್ಥಿಗಳೇ ನೆಟ್ಟು ಬೆಳೆಸಿದ ಔಷಧೀಯ ಸಸ್ಯಗಳನ್ನು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಪೋಷಕರಿಗೆ ವಿತರಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top