ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಉಪ್ಪಳಿಗೆ ಬಾರ್ತಕುಮೇರಿನ ಶ್ವೇತಾ ಕುಮಾರಿ ಅವರು ‘ಮಣ್ಣು ವಿಜ್ಞಾನ ಮತ್ತು ರಸಾಯನ ಶಾಸ್ತ್ರ ವಿಭಾಗ’ದಲ್ಲಿ ಮಂಡಿಸಿದ ಪ್ರಬಂಧಕ್ಕೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯವು ಚಿನ್ನದ ಪದಕದೊಂದಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ೧೨ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಡಾ.ಥಾವರ್‌ಚಂದ ಗೆಹ್ಲೋಟ್ ಚಿನ್ನದ ಪದಕದೊಂದಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದರು.
ಬೆಟ್ಟಂಪಾಡಿ ಗ್ರಾಮದ ಉಪ್ಪಳಿಗೆ ಬಾರ್ತಕುಮೇರು ನಿವಾಸಿ, ಬಿ.ಎಸ್.ಎನ್.ಎಲ್.ನ ನಿವೃತ್ತ ಸಬ್ ಡಿವಿಜನಲ್ ಇಂಜಿನಿಯರ್ ಸುಬ್ಬಣ್ಣ ನಾಯ್ಕ ಮತ್ತು ಶೇಷಮ್ಮ ದಂಪತಿ ಪುತ್ರಿಯಾಗಿರುವ ಶ್ವೇತಾ ಕುಮಾರಿ ಉಪ್ಪಳಿಗೆ ಸ.ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ರಾಮಕೃಷ್ಣ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ(ಜಿಕೆವಿಕೆ)ದಲ್ಲಿ ಅಗ್ರಿಕಲ್ಚರಲ್ ಬಿಎಸ್ಸಿ ಹಾಗೂ ಎಂಎಸ್ಸಿ ಪದವಿ ಪಡೆದುಕೊಂಡಿದ್ದು, ರಾಯಚೂರು ಕೃಷಿ ವಿಜ್ಞಾನ ವಿಶ್ವ ವಿದ್ಯಾನಿಲಯದಲ್ಲಿ ’ಮಣ್ಣು ವಿಜ್ಞಾನ ಮತ್ತು ರಾಸಾಯನ ಶಾಸ್ತ್ರ ವಿಭಾಗ’ದಲ್ಲಿ ಪ್ರಬಂಧ ಮಂಡಿಸಿ ಚಿನ್ನದ ಪದಕದೊಂದಿಗೆ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುತ್ತಾರೆ. ಇವರು ಪ್ರಸ್ತುತ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ(ಜಿಕೆವಿಕೆ)ದಲ್ಲಿ ಹಿರಿಯ ಸಂಶೋಧನಾ ಸಹೋದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.