ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ವತಿಯಿಂದ 2022-23 ನೇ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ 100 ಅಂಕ ಪಡೆದ ಕನ್ನಡ ಪ್ರತಿಭೆಗಳನ್ನು ಗೌರವಿಸುವ ವಿನೂತನ ಕಾರ್ಯಕ್ರಮ ಶನಿವಾರ ಪುತ್ತೂರು ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕನ್ನಡನಾಡಿನಲ್ಲಿ ಕನ್ನಡಕ್ಕಾಗಿ ಕೆಲಸ ಮಾಡಿ ಕನ್ನಡಕ್ಕೆ ತಮ್ಮದೇ ರೀತಿಯ ಕೊಡುಗೆಯನ್ನು ನೀಡಿದವರನ್ನು ಗೌರವಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸುವ ಕನ್ನಡ ಸಾಹಿತ್ಯ ಪರಿಷತ್ ಘಟಕದ ಕೆಲಸ ಶ್ಲಾಘನೀಯ ಎಂದರು. ಪುತ್ತೂರಿನಲ್ಲಿ ಕನ್ನಡ ಭವನ ನಿರ್ಮಿಸಲು ಸರ್ಕಾರದಿಂದ ಶಾಸಕನ ನೆಲೆಯಲ್ಲಿ ಅನುದಾನ ನೀಡುತ್ತೇನೆ. ದಾನಿಗಳು, ಸಿ.ಎಸ್.ಆರ್. ಫಂಡ್ ಕುರಿತೂ ಗಮನಹರಿಸೋಣ. ಒಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಭವನ ಸಿದ್ಧವಾಗಲಿದೆ ಎಂದು ಅಶೋಕ್ ರೈ ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪೀಟರ್ ಕೊಲ್ಲಿಯರ್, ಡೇವಿಡ್ ಹೊರೊವಿಟ್ಜ್ ಅವರು ಆಂಗ್ಲ ಭಾಷೆಯಲ್ಲಿ ಬರೆದಿರುವ ಅಮೇರಿಕಾದ ಕೆನೆಡಿ ಕುಟುಂಬದ ಕುರಿತ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ ಡಾ. ಎಂ. ಶಾಂತಾರಾಮ್ ರಾವ್ ಅವರ ‘ಕೆನ್ನಡಿಗಳು ಒಂದು ಕಥಾನಕ’ ಪುಸ್ತಕವನ್ನು ಹಿರಿಯ ಸಾಹಿತಿ ಡಾ. ವಸಂತ ಕುಮಾರ್ ತಾಳ್ತಜೆ ಬಿಡುಗಡೆ ಮಾಡಿದರು.
ಅವರು ಮಾತನಾಡಿ, ಅನುವಾದದ ಸಂದರ್ಭದಲ್ಲಿ ಪದಪುಂಜಗಳಲ್ಲಿ ಬರುವ ಅನುಭೂತಿ ಅತ್ಯಂತ ಮುಖ್ಯವಾಗುತ್ತದೆ. ಭಾಷಾಂತರ, ಭಾವಾಂತರ, ರೂಪಾಂತರ ಸಮರ್ಪಕವಾಗಿರುವುದು ಅನುವಾದದ ಸಂದರ್ಭದಲ್ಲಿ ಆವಶ್ಯಕ. ಕೆನ್ನೆಡಿಗಳು, ಒಂದು ಕಥಾನಕದ ಮೂಲಕ ಪುತ್ತೂರಿನ ಎಂ. ಶಾಂತಾರಾಮ ರಾವ್ ಅವರು ಪ್ರಸಿದ್ಧ ಕೆನೆಡಿ ಕುಟುಂಬದ ಕತೆಯನ್ನು ಅತ್ಯಂತ ಯಶಸ್ವಿಯಾಗಿ ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ನ್ಯಾಯವಾದಿ ಮುರಳೀಕೃಷ್ಣ ಚಲ್ಲಂಗಾರು ಕೃತಿಕಾರರ ಪರಿಚಯ ಮಾಡಿದರು. ಕ.ಸಾ.ಪ. ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಕೃತಿಯ ಕುರಿತು ಮಾತನಾಡಿದರು. ಕೃತಿಕಾರ ಎಂ. ಶಾಂತಾರಾಮ ರಾವ್ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ಕ.ಸಾ.ಪ.ದ ವತಿಯಿಂದ ಶಾಸಕರನ್ನು ಹಾಗೂ ಕೃತಿಕಾರ ಎಂ. ಶಾಂತಾರಾಮ್ ರಾವ್ ದಂಪತಿಯನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಣವ ಭಟ್ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು. ಕ.ಸಾ.ಪ. ಘಟಕದ ಗೌರವಾಧ್ಯಕ್ಷ ಐತಪ್ಪ ನಾಯ್ಕ್, ಗ್ರಾಮ ಸಾಹಿತ್ಯ ಸಂಭ್ರಮದ ಮಹಾಪೋಷಕ ಮಿತ್ರಂಪಾಡಿ ಜಯರಾಮ ರೈ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ಕ.ಸಾ.ಪ. ಪುತ್ತೂರು ಘಟಕದ ಗೌರವ ಕೋಶಾಧ್ಯಕ್ಷ ಹರ್ಷಕುಮಾರ್ ರೈ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆಯ್ಯೂರು ಶಾಲೆಯ ಮುಖ್ಯಗುರು ಬಾಬು ಎಂ. ವಂದಿಸಿದರು. ವಿವೇಕಾನಂದ ಕ.ಮಾ. ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಕಾರ್ಯಕ್ರಮ ನಿರ್ವಹಿಸಿದರು. 2022-23 ನೇ ಸಾಲಿನಲ್ಲಿ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಶೇ.೧೦೦ ಫಲಿತಾಂಶ ಪಡೆದ ಪುತ್ತೂರು ತಾಲೂಕಿನ 31 ಶಾಲೆಗಳ 174ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಿ ಅಭಿನಂದಿಸಲಾಯಿತು.