ಬೆಳ್ತಂಗಡಿ: ಧರ್ಮಸ್ಥಳ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ನಡೆದು 11 ವರ್ಷಗಳಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ರಾವ್ ಬಿಡುಗಡೆಯಾಗಿದೆ. ಇಂತಹಾ ಹೀನ ಬರ್ಬರ ಕೃತ್ಯವನ್ನು ಸರಿಯಾಗಿ ತನಿಖೆ ಮಾಡಿ ನಿಜವಾದ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗಿದ್ದು, ಇದು ಇಡೀ ಸಮಾಜಕ್ಕೆ ಆಘಾತ ಉಂಟು ಮಾಡಿದೆ ಎಂದು ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಎಚ್. ಪದ್ಮಗೌಡ, ಅಧ್ಯಕ್ಷ ಕುಶಾಲಪ್ಪ ಗೌಡ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅವರು ಮಂಗಳವಾರ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆ ಸಮಾಜದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಈ ವಿಚಾರವಾಗಿ ಸಂಘದ ಮುಖ್ಯಸ್ಥರನ್ನು ಪ್ರಶ್ನಿಸುವಂತಾಗಿದೆ. ಈ ನಿಟ್ಟಿನಲ್ಲಿ ಇಡೀ ಸಮಾಜ ನಮ್ಮೊಂದಿಗೆ ಕೈಜೋಡಿಸುವಂತೆ ಅವರು ವಿನಂತಿಸಿದರು.
ಈಗಾಗಲೇ ಈ ಕುರಿತು ಸಂಘದ ಸಮಿತಿ ಸಭೆ ಕರೆದು ತೀರ್ಮಾನ ಮಾಡಿದ್ದೇವೆ. ಸರಕಾರ ಮತ್ತೊಮ್ಮೆ ಸರಿಯಾದ ತನಿಖೆ ಮಾಡಿ ನಿಜವಾದ ಆರೋಪಿಗಳನ್ನು ಪತ್ತೆಮಾಡಿ ತಕ್ಕುದಾದ ಶಿಕ್ಷೆ ನೀಡಬೇಕು. ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದ ಅವರು, ಅದೆಷ್ಟೋ ಪ್ರಕರಣಗಳು ಉನ್ನತ ಮಟ್ಟದಲ್ಲಿ ತನಿಖೆ ಆಗಿದ್ದರೂ ರೀ ಓಪನ್ ಮಾಡಿದ ಉದಾಹರಣೆಗಳಿವೆ. ಸಂತ್ರಸ್ತೆಯ ತಂದೆ, ತಾಯಿ, ಅಜ್ಜ, ಅಜ್ಜಿ ಚಿಂತಾಜನಕ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ಮರು ತನಿಖೆಗೆ ಆಗ್ರಹಿಸುವುದು ನಮ್ಮ ನಿರ್ಧಾರ ಸರಿಯಾಗಿದೆ ಎಂದು ತಿಳಿಸಿದರು. ಈ ಕುರಿತು ಮುಂದಿನ ಶುಕ್ರವಾರ ಗ್ರಾಮ ಸಮಿತಿ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಕೃಷ್ಣ ಗೌಡ ಸವಣಾಲು, ಗಣೇಶ್ ಗೌಡ, ಶ್ರೀನಾಥ್, ಜಯಾನಂದ ಗೌಡ ಮತ್ತಿತರರು ಉಪಸ್ಥಿತರಿದ್ದರು.