ನಸುಕಿನ ಹೊತ್ತು 56 ಕಡೆಗಳಲ್ಲಿ ಎನ್‌ಐಎ ದಾಳಿ
ತಿರುವನಂತಪುರ : ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೊಸ ಹೆಸರಿನಲ್ಲಿ ತಲೆ ಎತ್ತುವ ಪ್ರಯತ್ನದಲ್ಲಿರುವ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಬೆಳ್ಳಂಬೆಳಗ್ಗೆ ಕೇರಳದ 56 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಪಿಎಫ್‌ಐನ ನಾಯಕರಿಗೆ ಸೇರಿದ ಮನೆ, ಆಫೀಸ್‌ಗಳು ಇನ್ನಿತರ ಸಂಸ್ಥಾಪನೆಗಳು ಸೇರಿದಂತೆ ಒಟ್ಟು 56 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಪಿಎಫ್‌ಐ ಸಂಘಟನೆಯನ್ನು ಬೇರೊಂದು ಹೆಸರಿನಲ್ಲಿ ಮರುರೂಪಿಸಲು ಯೋಜನೆ ರೂಪಿಸುತ್ತಿರುವ ಕುರಿತು ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಎರ್ನಾಕುಲಂನಲ್ಲಿ ಮತ್ತು ತಿರುವನಂತಪುರವನ್ನು ಕೇಂದ್ರೀಕರಿಸಿ ದಾಳಿ ಕಾರ್ಯಾಚರಣೆ ನಡೆದಿದೆ. ನಸುಕಿನ ನಾಲ್ಕು ಗಂಟೆಗೆ ಕಾರ್ಯಾಚರಣೆ ಆರಂಭವಾಗಿದೆ.
ಪಿಎಫ್‌ಐ ಹುಟ್ಟಿದ್ದೇ ಕೇರಳದಲ್ಲಿ. 2006ರಲ್ಲಿ ಹುಟ್ಟಿಕೊಂಡ ಪಿಎಫ್‌ಐ ಅಲ್ಲಿ ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರೂಪದಲ್ಲಿ 2009ರಲ್ಲಿ ರಾಜಕೀಯಕ್ಕೆ ಇಳಿದಿತ್ತು. ಬಳಿಕ ಪಿಎಫ್‌ಐಯು ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ವ್ಯಾಪಿಸಿದೆ.
ದೇಶದ ಭದ್ರತೆಗೆ ಮಾರಕ ಎಂಬ ಕಾರಣಕ್ಕೆ ದೇಶದಲ್ಲಿ ಪಿಎಫ್‌ಐ ಹಾಗೂ ಅದರ ಸೋದರ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಸಂಘಟನೆಯ ವಿರುದ್ಧ ಕಠಿಣ ಕ್ರಮದ ಕೈಗೊಳ್ಳುವುದಕ್ಕೂ ಮುನ್ನ, ರಾಷ್ಟ್ರೀಯ ಭದ್ರತಾ ಯೋಜಕರು ದೇಶದ ಪ್ರಮುಖ ಮುಸ್ಲಿಂ ಸಂಘಟನೆಯ ಹಿರಿಯರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದರು. ಅದಾದ ಬಳಿಕವೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಪಿಎಫ್‌ಐ ಹಾಗೂ ಅದರ ಅಂಗಸಂಸ್ಥೆಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಜತೆಗೆ ಅದರ ಇತರೆ ಸಂಘಟನೆಗಳಾದ ರೆಹಾಬ್ ಇಂಡಿಯಾ ಫೌಂಡೇಷನ್ (ಆರ್‌ಐಎಫ್), ಕ್ಯಾಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ), ನ್ಯಾಷನಲ್ ಕಾನ್‌ಫೆಡರೇಷನ್ ಆಪ್ ಹ್ಯೂಮನ್ ರೈಟ್ಸ್ ಆರ್ಗನೈಜೇಷನ್ (ಎನ್‌ಸಿಎಚ್‌ಆರ್‌ಒ), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಷನ್ ಮತ್ತು ರೆಹಾಬ್ ಫೌಂಡೇಷನ್, ಜತೆಗೆ ಕೇರಳದಲ್ಲಿ ಪಿಎಫ್‌ಐ ಜತೆಗೆ ನಂಟು ಹೊಂದಿರುವ ಇತರೆ ಸಂಘಟನೆಗಳಿಗೆ ನಿಷೇಧ ಹೇರಲಾಗಿದೆ.