ಪುತ್ತೂರು: ತಾಲೂಕಿನ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜುಗಳಲ್ಲಿರುವ ಅನೇಕ ಉದಯೋನ್ಮುಖ ಸಾಹಿತಿಗಳಿಗೆ ಮತ್ತು ಗ್ರಾಮದ ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗುರುತಿಸಿ ಸಾಹಿತ್ಯ ವೇದಿಕೆ ನೀಡುವ ನಿಟ್ಟಿನಲ್ಲಿ ಗ್ರಾಮ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮವನ್ನು ಕ ಸಾ ಪ ಪುತ್ತೂರು ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂತಹಾ ಸಮಾಜ ಮುಖಿ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದು ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಎನ್ ಹೇಳಿದರು.
ನೆಕ್ಕಿಲಾಡಿ ಗ್ರಾಮದ ಸ. ಹಿ. ಪ್ರಾ ಶಾಲೆಯಲ್ಲಿ ಪುತ್ತೂರು ಕ. ಸಾ. ಪ, ಶಿಕ್ಷಣ ಇಲಾಖೆ, ನೆಕ್ಕಿಲಾಡಿ ಗ್ರಾಮ ಪಂಚಾಯಿತಿ, ಸತ್ಯ ಶಾಂತಾ ಪ್ರತಿಷ್ಠಾನ ಸಹಕಾರದಲ್ಲಿ ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜನೆಯಲ್ಲಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷವಾಕ್ಯದಲ್ಲಿ ನಡೆಯುವ ಗ್ರಾಮ ಸಾಹಿತ್ಯ ಸಂಭ್ರಮದ 7ನೇ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುತ್ತೂರು ಕಸಾಪ. ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೆಕ್ಕಿಲಾಡಿ ಗ್ರಾಪಂ ಉಪಾಧ್ಯಕ್ಷೆ ಸ್ವಪ್ನ, ಕ ಸಾಪ ಕಾರ್ಯಕಾರಿ ಸಮಿತಿ ಸದಸ್ಯ ಉದಯಕುಮಾರ್ ಯು. ಎಲ್, ನೆಕ್ಕಿಲಾಡಿ ಸಿ.ಆರ್.ಪಿ. ಮಹಮ್ಮದ್ ಅಶ್ರಫ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೀವ ನಾಯ್ಕ್, ಗ್ರಾಮ ಸಾಹಿತ್ಯ ಸಂಭ್ರಮದ ಮಹಾಪೋಷಕ ಮಿತ್ರಂಪಾಡಿ ಜಯರಾಮ ರೈ ಶುಭ ಹಾರೈಸಿದರು.
ಸಾಧಕರಿಗೆ ಸನ್ಮಾನ :
ಪತ್ರಿಕೋದ್ಯಮ ಕ್ಷೇತ್ರದ ಸಾಧಕ ದಿನಕರ್ ಇಂದಾಜೆ, ಸಮಾಜ ಸೇವಕ ಜತೀಂದ್ರ ಶೆಟ್ಟಿ , ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ್ ರಾವ್, ಯುವ ಸಾಹಿತಿ ಶಾಂತ ಕುಂಟಿನಿ, ಕ್ಯಾನ್ಸರ್ ತಜ್ಞ ರಘು ಬೆಳ್ಳಿಪ್ಪಾಡಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಾಲ್ಕು ವಿವಿಧ ಗೋಷ್ಠಿಗಳು, ಬಾಲಕಥಾಗೋಷ್ಠಿ, ಯುವ ಕವಿಗೋಷ್ಠಿ ನಡೆಯಿತು. ಶಾಂತಿನಗರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸುಪ್ರೀತಾ ಚರಣ್ ಪಾಲಪ್ಪೆ , ಕು. ಶ್ರೇಯ ಮಿಂಚಿನಡ್ಕ , ಕು. ನವ್ಯ ಪುತ್ತೂರು,ರಶ್ಮಿತಾ ಸುರೇಶ್ ಮಾಣಿ ವಿವಿಧ ಗೋಷ್ಠಿ ಗಳನ್ನು ನಿರ್ವಹಿಸಿದರು. ನೆಕ್ಕಿಲಾಡಿ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು, ಶಾಲಾ ಮುಖ್ಯ ಶಿಕ್ಷಕಿ ಕಾವೇರಿ ಸ್ವಾಗತಿಸಿ, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪದ್ಮಾ ವಂದಿಸಿದರು.