ಹೈದರಾಬಾದ್ : ತೆಲುಗು ದೇಶಂ ಪಾರ್ಟಿಯ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಂ.ಚಂದ್ರಬಾಬು ನಾಯ್ಡು ಅವರ ಸಾರ್ವಜನಿಕ ಸಭೆಯಲ್ಲಿ ಕಾಲ್ತುಳಿತ ಸಂಭವಿಸಿ ಏಳು ಮಂದಿ ದುರ್ಮರಣ ಹೊಂದಿರುವ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕಂದುಕೊರ್‌ನಲ್ಲಿ ಸಾರ್ವಜನಿಕ ಸಭೆಗೆ ಚಂದ್ರಬಾಬು ನಾಯ್ಡು ಆಗಮಿಸಿದಾಗ ಆ ದುರ್ಘಟನೆ ನಡೆದಿದೆ.
ಬೃಹತ್ ಸಮಾವೇಶದಲ್ಲಿ ನೆರೆದಿದ್ದ ಸಾವಿರಾರು ಟಿಡಿಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ನಡುವೆ ತಳ್ಳಾಟ ಮತ್ತು ನೂಕಾಟ ನಡೆದಿದ್ದು, ಕೆಲವರು ಹತ್ತಿರದ ಒಳಚರಂಡಿ ಕಾಲುವೆಗೆ ಜಿಗಿದು ಕಾಲ್ತುಳಿತದಿಂದ ತಪ್ಪಿಸಿಕೊಂಡರೆ, ಮತ್ತೆ ಕೆಲವರು ಜನರ ಗುಂಪಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಚಾರ ಕಾರ್ಯಕ್ರಮವನ್ನು ರದ್ದುಗೊಳಿಸಿದ ಚಂದ್ರಬಾಬು ನಾಯ್ಡು ಸಂತ್ರಸ್ತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. 2024ರ ವಿಧಾನಸಭಾ ಚುನಾವಣೆ ಅಂಗವಾಗಿ ಚಂದ್ರಬಾಬು ನಾಯ್ಡು ಸಾರ್ವಜನಿಕ ಸಭೆ ಹಾಗೂ ರೋಡ್ ಶೋ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.