ಪುತ್ತೂರು: ಎಪಿಎಂಸಿ ಅಂಡರ್ ಪಾಸ್ ರಸ್ತೆ ಒಂದು ಹಂತದಲ್ಲಿ ಕಾಲಮಿತಿಯೊಳಗೆ ಮುಗಿದಿದ್ದು, ಮುಂದಿನ ಕಾಮಗಾರಿಗಳಿಗೆ ಕೆಲವೊಂದು ತೊಡಕುಗಳಿದ್ದು, ಅದನ್ನು ಸರಿಪಡಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಅವರು ಮಂಗಳವಾರ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು.
ರೈಲ್ವೇ ಅಂಡರ್ ಪಾಸ್ ಪುತ್ತೂರಿನ ಬಹುಬೇಡಿಕೆಯಾಗಿದ್ದು, ಕಾಮಗಾರಿ ಮುಗಿದು ಸಂಚಾರಕ್ಕೆ ಈಗಾಗಲೇ ತೆರೆದುಕೊಂಡಿದೆ. ಹಾಗೆಯೇ ಜಿಲ್ಲೆಯ ಹಲವು ಕಡೆಗಳಲ್ಲಿ ಅಂಡರ್ ಪಾಸ್ ಅಥವಾ ಓವರ್ ಬ್ರಿಡ್ಜ್ ನ ಬೇಡಿಕೆಯಿದೆ. ಈ ಬೇಡಿಕೆ ಇಲ್ಲದೇ ಇರುತ್ತಿದ್ದರೆ ಇಷ್ಟರೊಳಗೆ ಮಂಗಳೂರಿನ ವಂದೇ ಮಾತರಂ ರೈಲು ಬರುತ್ತಿತ್ತು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ಅರಣ್ಯ ವ್ಯಾಪ್ತಿ ಬರುವುದರಿಂದ ಕಾಮಗಾರಿ ವಿಳಂಬ ಆಗುತ್ತಿದೆ ಎಂದರು.
ಇನ್ನೊಂದು ಬೇಡಿಕೆಯಾದ ವಿವೇಕಾನಂದನ ಕಾಲೇಜು ರಸ್ತೆಯ ಮೇಲ್ಸೇತುವೆ ಅಗಲೀಕರಣ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಚನಿಲ ತಿಮ್ಮಪ್ಪ ಶೆಟ್ಟಿ, ದಿನೇಶ್ ಮೆದು, ಸಾಜ ರಾಧಾಕೃಷ್ಣ ಆಳ್ವ, ಸಹಾಯಕ ಆಯುಕ್ತ ಗಿರೀಶ್ ನಂದನ್, ಪೌರಾಯುಕ್ತ ಮಧು ಎಸ್. ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.