ಪುತ್ತೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ ನಿರ್ಮಾಣಕ್ಕೆ ಪುತ್ತೂರು ಕಸಬಾ ಗ್ರಾಮದ ಕೋಟೆಚಾ ಸಭಾಂಗಣದ ಹಿಂಭಾಗದಲ್ಲಿರುವ ಮೌಲಾನ ಆಜಾದ್ ಶಾಲೆಯ ಬಳಿ 9 ಸೆನ್ಸ್ ಜಮೀನು ಮಂಜೂರುಗೊಂಡಿದೆ.
ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ಜೂನ್ 6 ರಂದು ಆದೇಶ ಮಾಡಿ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಹೆಸರಿನಲ್ಲಿ ಮಂಜುರು ಮಾಡಿದ್ದಾರೆ. 2022ರ ಜೂನ್ ತಿಂಗಳಿನಲ್ಲಿ ಪ್ರಾರಂಭ ಮಾಡಿದ ಈ ಪ್ರಕ್ರಿಯೆಯು ವಿವಿಧ ಸರಕಾರಿ ಕಚೇರಿಯ ನಿಯಮಾನುಸಾರ ಕಡತ ಪರಿಶೀಲನೆಗೊಂಡು ಜಮೀನು ಮಂಜೂರಾದ ಅಧಿಕೃತ ಆದೇಶ ಪತ್ರ ಕೈ ಸೇರಿದೆ.
ಈ ಪ್ರಕ್ರಿಯೆಯು ಸಹಾಯಕ ಆಯುಕ್ತರ ಕಚೇರಿ, ತಹಸಿಲ್ದಾರ್ ಕಚೇರಿ, ಭೂಮಾಪನ ಕಚೇರಿ, ನಗರ ಸಭೆ, ಗ್ರಾಮಚಾವಡಿ ಗ್ರಾಮ ಲೆಕ್ಕಿಗರ ಕಚೇರಿಯ ಸಿಬ್ಬಂದಿಗಳು ಯಾ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಲಂಚಕ್ಕೆ ಬೇಡಿಕೆ ಅಥವಾ ಕಡತ ವಿಲೆಯಲ್ಲಿ ಅಸಡ್ಡೆ, ದುರ್ವರ್ತನೆ ತೋರದೆ ನಗುಮೊಗದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಮಂಜೂರಾಗುವಲ್ಲಿ ಸಹಕರಿಸಿ ದ್ದಾರೆ.
ಜಮೀನು ಮಂಜೂರಾದ ಹಿನ್ನೆಲೆ ಪುತ್ತೂರು ಉಮೇಶ್ ನಾಯಕ್ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಫೆಬ್ರವರಿ 2022 ರಲ್ಲಿ ಪದ ಸ್ವೀಕಾರ ಮಾಡುವ ಸಮಯದಲ್ಲಿ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಪರಿಷತ್ತಿನ ಸದಸ್ಯರಾದ ಡಾ. ಸುಧಾರಾವ್ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ವಿಳಾಸ ಇಲ್ಲ ಅದಕ್ಕೊಂದು ಶಾಶ್ವತವಾದ ವಿಳಾಸವನ್ನು ಕಲ್ಪಿಸಿ ಕೊಡುವಂತೆ ಅಂದಿನ ಶಾಸಕರಾದ ಸಂಜೀವ ಮಠoದೂರು ಅವರ ಗಮನ ಸೆಳೆದಿದ್ದರು ಸ್ಥಳದಲ್ಲಿಯೇ ಸಾಹಿತ್ಯ ಪರಿಷತ್ತಿಗೆ ಸ್ಥಳವನ್ನು ಮಂಜೂರು ಮಾಡುವ ಭರವಸೆಯನ್ನು ಶಾಸಕರು ನೀಡಿ ಸ್ಥಳವನ್ನು ತೋರಿಸಿ ಅಧಿಕಾರಿಗಳಿಗೆ ಜಮೀನು ಮಂಜೂರು ಮಾಡುವಂತೆ ಸೂಚಿಸಿದ್ದರು.
ಕನ್ನಡ ಭವನಕ್ಕೆ ಸ್ಥಳ ಮಂಜೂರು ಮಾಡುವಲ್ಲಿ ಸಹಕರಿಸಿದ ಮಾಜಿ ಶಾಸಕ ಸಂಜೀವ ಮಠಂದೂರು, ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರಿಗೂ ವಿವಿಧ ಇಲಾಖೆಯ ಸರ್ವ ಅಧಿಕಾರಿಗಳಿಗೂ ಸರ್ವ ಸಿಬ್ಬಂದಿಗಳಿಗೂ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೂ ಪುತ್ತೂರು ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಧನ್ಯವಾದವನ್ನು ಅರ್ಪಿಸಿದ್ದಾರೆ.