ಪುತ್ತೂರು: ಬಪ್ಪಳಿಗೆಯಲ್ಲಿ ಸುದ್ದಿಗಾಗಿ ವಿಡಿಯೋ ಶೂಟಿಂಗ್ ಮಾಡುತ್ತಿದ್ದ ವಿಜಯವಾಣಿ ವರದಿಗಾರ, ನಮ್ಮ ಸಂಘದ ಸದಸ್ಯರೂ ಆಗಿರುವ ನಿಶಾಂತ್ ಬಿಲ್ಲಂಪದವು ಅವರ ಮೊಬೈಲ್ ಕಸಿದು ನೆಲಕ್ಕೆ ಬಡಿದು ದೌರ್ಜನ್ಯ ನಡೆಸಿರುವ ಗುತ್ತಿಗೆದಾರರ ನಡೆಯನ್ನು ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕ ಖಂಡಿಸುತ್ತದೆ.
ಆರೋಪಿ ವಿರುದ್ದ ತಕ್ಷಣ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತಿದೆ.
ಶನಿವಾರ ಬಲ್ನಾಡಿನ ಗುಂಪಕಲ್ಲು ಎಂಬಲ್ಲಿ ಸಂಜೆ ಅಪಾಯಕಾರಿ ಮರದ ಗೆಲ್ಲುಗಳನ್ನು ಕಡಿಯುತ್ತಿದ್ದ ಸಂದರ್ಭ ಮೆಸ್ಕಾಂ ಸಿಬ್ಬಂದಿಗಳ ವೀಡಿಯೋ ಚಿತ್ರಿಕರಿಸುತ್ತಿದ್ದ ಪತ್ರಕರ್ತ ನಿಶಾಂತ್ ಬಿಲ್ಲಂಪದವು ಅವರ ಮೊಬೈಲ್ ಕಸಿದು ನೆಲಕ್ಕೆ ಬಡಿದು ಹುಡಿ ಮಾಡಿರುವ ಘಟನೆ ನಡೆದಿದೆ.
ಮೆಸ್ಕಾಂನಿಂದ ಗುತ್ತಿಗೆ ಪಡೆದಿರುವ ಕಂಟ್ರಾಕ್ಟ್ ದಾರ ಕಾರ್ಮಿಕರು ಈ ಕೆಲಸ ಮಾಡುತ್ತಿದ್ದು, ಮಾನದಂಡದ ಪ್ರಕಾರ ಅಗತ್ಯ ಸುರಕ್ಷತಾ ಸಾಧನಗಳನ್ನು ಬಳಸಿರಲಿಲ್ಲ. ಅಪಾಯಕ್ಕೆ ಆಹ್ವಾನಿಸುವ ರೀತಿಯಲ್ಲಿ ವಿದ್ಯುತ್ ತಂತಿ ಪಕ್ಕ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಈ ಕುರಿತು ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಳೆ ಈ ರೀತಿಯ ದೌರ್ಜನ್ಯ ನಡೆದಿದೆ.