ಪುತ್ತೂರು: ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳ ಜತೆಗೆ ಫಲಾನುಭವಿಗಳಿಗೆ ಅನುದಾನ ನೀಡಲು ಅವರ ದಾಖಲೆಗಳನ್ನು ನಗರಸಭೆ, ಕಂದಾಯ ಇಲಾಖೆ ಜಂಟಿಯಾಗಿ ಚರ್ಚಿಸಿ ಪರಿಹರಿಸುವಂತೆ ಪುತ್ತೂರು ನಗರಸಭಾ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಡೆದ ತುರ್ತು ಕಾರ್ಯಗಳ ಕುರಿತ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ಪುತ್ತೂರು ನಗರಸಭೆಯಲ್ಲಿ ಅಭಿವೃದ್ಧಿಗೆ ಸಿಬ್ಬಂದಿಗಳ ಕೊರತೆಯಿದೆ. ಬಹುತೇಕ ಅಧಿಕಾರಿಗಳನ್ನು ಬೇರೆಡೆಗೆ ನಿಯೋಜಿಸಲಾಗುತ್ತಿದೆ. ಅಮೃತ ನಗರೋತ್ಥಾನದ ಗುತ್ತಿಗೆದಾರರೊಬ್ಬರ ಸಮಸ್ಯೆಯಿಂದ ಕಾಮಗಾರಿಗಳು ವಿಳಂಬವಾಗಿದೆ. ಫಲಾನುಭವಿಗಳಿಗೆ ಸಿಗಬೇಕಾದ ಅನುದಾನ ಸಿಗುತ್ತಿಲ್ಲ., ವಾರ್ಡ್‌ಗೆ ಸಂಬಂಧಿಸಿ ತಂಡ ರಚನೆಯನ್ನು ಮಾಡಿಲ್ಲ ಎಂದು ನಗರಸಭೆ ಸದಸ್ಯರು ಜಿಲ್ಲಾಧಿಕಾರಿಗಳಲ್ಲಿ ಪ್ರಸ್ತಾಪಿಸಿದರು.
ಸಭೆಯಲ್ಲಿ ನಗರಸಭೆ ಸದಸ್ಯರಾದ ಶಕ್ತಿ ಸಿನ್ನ ಶೈಲಾ ಪೈ, ಸಂತೋಷ್ ಬೊಳುವಾರು, ಸುಂದರ ಪೂಜಾರಿ, ಪಿ.ಜಿ.ಜಗನ್ನಿವಾಸ ರಾವ್, ಪದ್ಮನಾಭ ನಾಯ್ಕ, ಮನೋಹರ್ ಕಲ್ಲಾರೆ, ಬಾಲಚಂದ್ರ, ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ ಉಪಸ್ಥಿತರಿದ್ದು ವಿವಿಧ ಸಮಸ್ಯೆಗಳನ್ನು ಕುರಿತು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಭೀದ ಗದ್ಯಾಳ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಪುರಂದರ್ ಕೆ.ಎಮ್, ಐಎಎಸ್ ಪ್ರೊಬೇಷನರಿ ಅಧಿಕಾರಿ ಮುಕುಂದ ಜೈನ್, ಸಹಾಯಕ ಕಮೀಷನರ್ ಮಹೇಶ್ಚಂದ್ರ, ತಹಶೀಲ್ದಾರ್ ಶಿವಶಂಕರ್, ಪೌರಾಯುಕ್ತ ಮಧು ಎಸ್ ಮನೋಹರ್ ಉಪಸ್ಥಿತರಿದ್ದರು.