ಪುತ್ತೂರು: ಪುತ್ತೂರು:ಪುತ್ತೂರು ಉಪವಿಭಾಗಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗಿರೀಶ್ ನಂದನ್ ಅವರ ವರ್ಗಾವಣೆ ಆದೇಶಕ್ಕೆ ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ ತಡೆಯಾಜ್ಞೆ ನೀಡಿದೆ.
ಅವಧಿಪೂರ್ವ ಮತ್ತು ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಎತ್ತಿನಹೊಳೆ ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿ ಹುದ್ದೆಗೆ ಮತ್ತೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಗಿರೀಶ್ ನಂದನ್ ಕೆಎಟಿ ಗೆ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಕೆಎಟಿ ವರ್ಗಾವಣೆ ಆದೇಶಕ್ಕೆ ತಡೆ ನೀಡಿದೆ.
ಈ ಹಿಂದೆ ಗಿರೀಶ್ ನಂದನ್ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸರಕಾರ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ನೋಟೀಸ್ ಜಾರಿಗೊಳಿಸಿ ತನಿಖಾಧಿಕಾರಿಯನ್ನು ನೇಮಿಸಿತ್ತು. ಈ ನಡುವೆ ವಿಚಾರಣೆ ಪೂರ್ಣಗೊಳ್ಳುವುದಕ್ಕೆ ಮೊದಲು ಅವರನ್ನು ಹಾಸನ ಮೇಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ವರ್ಗಾವಣೆಗೊಳಿಸಿತ್ತು. ತದನಂತರ 2-2-2022ರಲ್ಲಿ ಪುತ್ತೂರು ಉಪವಿಭಾಗಧಿಕಾರಿಯಾಗಿ ವರ್ಗಾವಣೆಗೊಳಿಸಿತ್ತು. ತನ್ನ ವಿರುದ್ಧದ ತನಿಖೆ ಪೂರ್ಣಗೊಳ್ಳುವುದಕ್ಕೆ ಮೊದಲು ಮತ್ತೆ ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಅವಧಿ ಪೂರ್ವ ವರ್ಗಾವಣೆ ಮಾಡಿರುವ ಬಗ್ಗೆ ಗಿರೀಶ್ ನಂದನ್ ಕೆಎಟಿ ಗೆ ದೂರು ದಾಖಲಿಸಿದ್ದರು. ದೂರು ದಾಖಲಿಸಿದ ಕೆಎಟಿ ಮುಂದಿನ ಆದೇಶದವರೆಗೆ ಸರಕಾರದ ವರ್ಗಾವಣೆ ಆದೇಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.