ಯುವಕನ ಹತ್ಯೆ : ಕರವೇ ಅಧ್ಯಕ್ಷನ ಸಹಿತ ಐದು ಮಂದಿ ಸೆರೆ

9 ತಿಂಗಳ ಬಳಿಕ ನಿಗೂಢ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಬೆಂಗಳೂರು: ಒಂಬತ್ತು ತಿಂಗಳ ಹಿಂದೆ ನಡೆದಿದ್ದ ಅಪಹರಣ ಹಾಗೂ ಹತ್ಯೆ ಪ್ರಕರಣವನ್ನು ಕೊನೆಗೂ ಭೇದಿಸಿರುವ ಪೊಲೀಸರು ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕಬಳ್ಳಾಪುರ ಘಟಕದ ಅಧ್ಯಕ್ಷ ಎಚ್‌.ಜಿ.ವೆಂಕಟಾಚಲಪತಿ, ಆತನ ಪುತ್ರ ಎ.ವಿ.ಶರತ್‌ ಕುಮಾರ್‌ ಸಹಿತ ಐವರನ್ನು ಬಂಧಿಸಿದ್ದಾರೆ. ಆರ್‌.ಶ್ರೀಧರ್‌, ಕೆ.ಧನುಷ್‌ ಮತ್ತು ಎಂ.ಪಿ.ಮಂಜುನಾಥ್‌ ಸೆರೆಯಾಗಿರುವ ಇತರ ಆರೋಪಿಗಳು. ಹಣಕಾಸಿನ ವಿಚಾರವಾಗಿ ಈ ಹತ್ಯೆ ನಡೆದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಶರತ್ ಯುವಕನನ್ನು ಬೆಂಗಳೂರಿನಿಂದ ಕಿಡ್ನಾಪ್‌ ಮಾಡಿ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿ ಶವವನ್ನು ಚಾರ್ಮುಡಿ ಘಾಟ್‌ನಲ್ಲಿ ಎಸೆದಿದ್ದರು. ಆದ್ರೆ ಕಿಡ್ನಾಪ್ ಮಾಡಿದ್ದ ವೇಳೆ ಮಾಡಿಕೊಂಡಿದ್ದ ವಿಡಿಯೋ ಮೂಲಕ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. .
ಈ ವಿಡಿಯೋ ಸೋಷಿಯಲ್‌ಮೀಡಿಯಾಗಳಲ್ಲಿ ಹರಿದಾಡಿ ಕೊನೆಗೆ ಕಬ್ಬನ್ ಪಾರ್ಕ್ ಸಬ್ ಡಿವಿಷನ್ ಎಸಿಪಿಗೂ ತಲುಪಿತ್ತು. ಆ ಹಿನ್ನೆಲೆ ಸ್ವಪ್ರೇರಿತ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡ ಕಬ್ಬನ್‌ ಪಾರ್ಕ್ ಪೊಲೀಸರು ಹಂತಕರನ್ನು 9 ತಿಂಗಳ ಬಳಿಕ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹತ್ಯೆಯಾದ ಶರತ್ ಎಸ್‌ಸಿ-ಎಸ್‌ಟಿ ಅಭಿವೃದ್ದಿ ನಿಗಮದಿಂದ ಸಿಗುವ ಕೆಲ ಸೌಲಭ್ಯಗಳನ್ನ ಕೊಡಿಸುವುದಾಗಿ ನಂಬಿಸಿ 20 ಲಕ್ಷ ರೂ. ಪಡೆದು ವಂಚಿಸಿದ್ದ. ಶರತ್ ಬಳಿ ಹಣ ವಾಪಸು ಕೊಡುವಂತೆ ಕೇಳಿ‌ ಸುಸ್ತಾಗಿದ್ದ ಆರೋಪಿ ಶರತ್ ಕುಮಾರ್‌ ಮಾರ್ಚ್‌ನಲ್ಲಿ‌ ಶರತ್ ಮೈಸೂರಿನಿಂದ ಬೆಂಗಳೂರಿಗೆ ಬಂದು ಬನಶಂಕರಿ ಬಸ್ ನಿಲ್ದಾಣದ ಬಳಿ ನಡೆದು ಹೋಗ್ತಿದ್ದ ವೇಳೆ ಕಾರಿನಲ್ಲಿ ಕಿಡ್ನಾಪ್ ಮಾಡಿ ಗೌರಿಬಿದನೂರಿನ ಫಾರ್ಮ್ ಹೌಸ್‌ಗೆ ಕರೆದೊಯ್ದು ಕೋಣೆಯಲ್ಲಿ ಕೂಡಿ ಹಾಕಿ ನಗ್ನಗೊಳಿಸಿ ಹಲ್ಲೆ ಮಾಡಿದ್ದರು.ನಂತರ ಮರಕ್ಕೆ ನೇತು ಹಾಕಿ ಮನಬಂದಂತೆ ಥಳಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ಶರತ್ ಸಾವನ್ನಪ್ಪಿದ್ದಾಗ ಶವವನ್ನು ಮೂಟೆಯಲ್ಲಿ ತುಂಬಿ ಚಾರ್ಮಾಡಿ ಘಾಟ್‌ನಲ್ಲಿ ಎಸೆದಿದ್ದರು. ಬಳಿಕ ಶರತ್ ಪೋಷಕರಿಗೆ ಆತನ ಫೋನ್‌ನಿಂದಲೇ ಕರೆ ಮಾಡಿದ ಹಂತಕರು, ನನಗೆ ಸಾಲ ಹೆಚ್ಚಾಗಿದೆ. ನಾನು ಊರು ಬಿಟ್ಟು ಹೋಗ್ತಿದ್ದೇನೆ. ಸೆಟೆಲ್‌ ಆದ್ಮೇಲೆ ಬರ್ತೇನೆ ಅಂತೇಳಿ ಫೋನ್ ಸ್ವಿಚ್ ಆಫ್ ಮಾಡಿ ಲಾರಿ ಮೇಲೆ ಎಸೆದಿದ್ದರು.
ಮನೆಯವರು ಮಗ ದುಡಿಯಲು ಹೋಗಿದ್ದಾನೆ ಅಂದುಕೊಂಡಿದ್ದರು. ಇತ್ತ ಆರೋಪಿಗಳು ಯಾರಿಗೂ ಅನುಮಾನ ಬರದಂತೆ 9 ತಿಂಗಳಿಂದ ಆರಾಮಾಗಿದ್ದರು. ಆದರೆ ಅವರೇ ಮಾಡಿಕೊಂಡಿದ್ದ ಹಲ್ಲೆಯ ದೃಶ್ಯಗಳು ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನಿಂದ ಲೀಕ್ ಆಗಿತ್ತು. ಅದು ಒಬ್ಬರಿಂದ ಒಬ್ಬರ ಮೊಬೈಲ್‌ಗೆ ಹರಿದು ಕೊನೆಗೆ ಪೊಲೀಸರ ಕೈ ಸೇರಿತ್ತು. ವಿಡಿಯೋ ನೋಡಿ ಶಾಕ್ ಆದ ಪೊಲೀಸರು ಏನೋ ಆಗಿದೆ ಎಂಬ ಅನುಮಾನದಲ್ಲಿ ತನಿಖೆ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top