ಕೊರೊನಾ ಹಿನ್ನೆಲೆಯಲ್ಲಿ ಮಾರ್ಗಸೂಚಿ ಹೊರಡಿಸಿದ ಸರಕಾರ
ಬೆಂಗಳೂರು : ಕೋವಿಡ್ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಶಾಲಾ-ಕಾಲೇಜುಗಳು, ಮಾಲ್‌ಗಳು ಮತ್ತು ಚಿತ್ರಮಂದಿರಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದೆ. ಈ ಮಾರ್ಗಸೂಚಿಯು ತಕ್ಷಣದಿಂದಲೇ ಜಾರಿಗೆ ಬರಲಿದೆ.
ಹೊಸ ವರ್ಷಾಚರಣೆಗೂ ಕೆಲ ನಿಯಮಗಳನ್ನು ರೂಪಿಸಿದೆ. ಹೊಸ ವರ್ಷಾಚರಣೆ ಮಧ್ಯರಾತ್ರಿ 1 ಗಂಟೆಯೊಳಗೆ ಮುಗಿಯಬೇಕು. ಕೋವಿಡ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾಸ್ಕ್‌ಗಳನ್ನು ಕಡ್ಡಾಯಗೊಳಿಸಿದೆ. ಈ ನಿಟ್ಟಿನಲ್ಲಿ ಮಧ್ಯರಾತ್ರಿಯ ಭಾರಿ ಸಂಭ್ರಮಕ್ಕೆ ಸಣ್ಣ ಬ್ರೇಕ್ ಹಾಕಲಾಗಿದೆ. ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗಿನ ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಚಿತ್ರ ಮಂದಿರಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಪಬ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಲ್ಲಿ ಹೊಸ ವರ್ಷವನ್ನು ಆಚರಿಸುವ ಸಂದರ್ಭದಲ್ಲಿಯೂ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಎಂದು ಹೇಳಿದ್ದಾರೆ.
ಸದ್ಯ ಶೇ. 21 ಜನರು ಮಾತ್ರ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ. ಇದನ್ನು ಶೇ.50ಕ್ಕೆ ಏರಿಸಬೇಕಿದೆ. ಸರ್ಕಾರಕ್ಕೆ ಜನರ ಸಹಕಾರ ಅಗತ್ಯ. ಬೂಸ್ಟರ್ ಡೋಸ್ ಕಡ್ಡಾಯವಲ್ಲ, ಅತ್ಯವಶ್ಯಕವಾಗಿದೆ. ಈ ಮೊದಲ ಎರಡು ಡೋಸ್ ಅನ್ನೂ ನಾವು ಕಡ್ಡಾಯ ಮಾಡಿರಲಿಲ್ಲ. ಹೀಗಿದ್ದರೂ ಜನರು ಸ್ವಯಂ ಪ್ರೇರಣೆಯಿಂದ ಪಡೆದಿದ್ದರು. ಹೀಗಾಗಿ ಬೂಸ್ಟರ್ ಡೋಸ್ ಸಹ ಪಡೆಯಬೇಕು ಎಂದು ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.