ಪುತ್ತೂರು: ಬೆಳಗಾವಿ ಜಿಲ್ಲೆಯ ನಂದಿ ಪರ್ವತ ಆಶ್ರಮದ ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆಯ ಸುದ್ದಿ ತೀವ್ರ ಆಘಾತವುಂಟುಮಾಡಿದ್ದು, ಅಹಿಂಸೆಯೇ ಪರಮಧರ್ಮ ಎಂದು ಬೋಧಿಸಿದ ಜೈನ ಮುನಿಗಳ ಈ ರೀತಿಯ ಹತ್ಯೆ ರಾಜ್ಯವೇ ತಲೆ ತಗ್ಗಿಸಿ ತಗ್ಗಿಸುವಂತಹ ಕೃತ್ಯವಾಗಿದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.
ದಿಗಂಬರ ಮುನಿ ಕಾಮಕುಮಾರ ನಂದಿ ಮಹಾರಾಜ ಶಾಂತಿಪ್ರಿಯರಾಗಿದ್ದರು. ಧರ್ಮಕ್ಕಾಗಿ ಸರ್ವಸ್ವ ತ್ಯಾಗ ಮಾಡಿದವರು. ಸಲ್ಲೇಖನ ಅಥವಾ ಸಮಾಧಿ ಸ್ಥಿತಿಯ ಮೂಲಕ ಅವರು ಪ್ರಾಣ ಬಿಡಲು ಬಯಸಿದವರು. ಅಂಥವರನ್ನು ಅಮಾನುಷವಾಗಿ ಕೊಲೆ ಮಾಡಿದ್ದು ಸಮಸ್ತ ಹಿಂದೂ ಸಮಾಜವನ್ನು ಸಹಜವಾಗಿ ಆಕ್ರೋಶ ಗೊಳಿಸಿದೆ. ಅವರಿಂದಲೇ 6 ಲಕ್ಷ ಸಾಲ ಪಡೆದು ಅದನ್ನು ಹಿಂದಿರುಗಿಸದೇ ಅವರನ್ನು ವಿದ್ಯುತ್ ಶಾಕ್ ಕೊಟ್ಟು ಕೊಲೆಗೈದು ,ಅವರ ದೇಹವನ್ನು ತುಂಡುಮಾಡಿ 400 ಅಡಿಯ ಬೋರ್ ವೆಲ್ ಗೆ ತುರುಕಿಸುವ ಮೂಲಕ ಭಯೋತ್ಪಾದಕ ಕೃತ್ಯವನ್ನು ಮಾಡಿದ ನಾರಾಯಣ ಮಾಳಿ ಹಾಗೂ ಹಸನ್ ಡಾಲಾಯತ್ ಕೃತ್ಯ ನಿಜಕ್ಕೂ ಮಾನವ ಸಮಾಜ ತಲೆತಗ್ಗಿಸುವಂತಹದು.
ಮಾನವೀಯತೆ ಮರೆತು ಮೃಗಗಳ ರೀತಿ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು , ಆರೋಪಿಗಳ ಹಿಂದಿರುವ ಕಾಣದ ಕೈಗಳ ಪತ್ತೆಯಾಗಬೇಕು ಹಾಗೂ ಮಠಾಧೀಶರುಗಳಿಗೆ ಸೂಕ್ತ ಭದ್ರತೆ ಸರ್ಕಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.