ಬೆಂಗಳೂರು : ಗ್ರಾಮ ಪಂಚಾಯಿತಿ ಸದಸ್ಯರ ಆಸ್ತಿ ವಿವರ ಸಲ್ಲಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಮೂರು ತಿಂಗಳೊಳಗೆ ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದೆ.
ಆಸ್ತಿ ವಿವರ ಸಲ್ಲಿಸಲು ವಿಫಲವಾದರೆ ಶೋಕಾಸ್ ನೋಟಿಸ್ ನೀಡದೇ ಸದಸ್ಯತ್ವದಿಂದ ಅನರ್ಹಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ಇದಕ್ಕೆ ಉದಾಹರಣೆ ಎಂಬಂತೆ ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ಮೊಘಾ ಗ್ರಾಪಂ ಸದಸ್ಯೆ ಲಲಿತಾಬಾಯಿ ಪಾಟೀಲ್ ಎಂಬವರನ್ನು ರಾಜ್ಯ ಚುನಾವಣಾ ಆಯೋಗ ಸದಸ್ಯತ್ವದಿಂದ ಅನರ್ಹಗೊಳಿಸಿದ್ದು, ಇದನ್ನು ಪ್ರಶ್ನಿಸಿ ಲಲಿತಾಬಾಯಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಲಲಿತಾ ಬಾಯಿ ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಸಹ ನೀಡಿತ್ತು.
ಒಂದು ವೇಳೆ ತಡವಾಗಿ ಆಸ್ತಿ ವಿವರ ಸಲ್ಲಿಸಿದ್ದರೆ ಅಥವಾ ಸಲ್ಲಿಸಿದ ವಿವರ ಸುಳ್ಳಾಗಿದ್ದರೆ ಶೋಕಾಸ್ ನೋಟಿಸ್ ನೀಡಬೇಕಾಗುತ್ತದೆ. ಆದರೆ ಸದಸ್ಯರಾದ ಮೂರು ತಿಂಗಳ ಬಳಿಕವೂ ಸಲ್ಲಿಸದೇ ಇದ್ದರೆ ಶೋಕಾಸ್ ನೋಟಿಸ್ ನೀಡದೆಯೂ ಅನರ್ಹಗೊಳಿಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.