ಪುತ್ತೂರು : ದ.ಕ.ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಭದ್ರಕೋಟೆಯನ್ನು ಅಲುಗಾಡಿಸಿರುವ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅರುಣ್ ಕುಮಾರ್ ಪುತ್ತಿಲರ ಬಿಜೆಪಿ ಜತೆಗಿನ ಸಂಧಾನ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು ಇದೀಗ ಬಹಿರಂಗಗೊಂಡಿದೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪುತ್ತಿಲರನ್ನು ದೆಹಲಿಗೆ ಕರೆಸಿ ರಹಸ್ಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಚುನಾವಣೆ ಪೂರ್ವ ಹಾಗೂ ನಂತರ ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದ್ದು, ಈ ಸಭೆ ಜೂನ್‍ನಲ್ಲೇ ನಡೆದಿದೆ ಎಂಬುದು ಇದೀಗ ಬಹಿರಂಗವಾಗಿದೆ.
ಈ ಬಾರಿಯ ವಿಧಾನಸಭೆ ಚುನಾವಣೆ ಸಂದರ್ಭ ಪುತ್ತೂರು ಬಿಜೆಪಿ ವಲಯದಲ್ಲಿ ಕುತೂಹಲ ಕೆರಳಿಸಿತ್ತು. ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ, ಮತ್ತೊಂದೆಡೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದು ಎಲ್ಲರಿಗೂ ಗೊತ್ತಿದೆ. ಪರಿಣಾಮ ಬಿಜೆಪಿ ಮೂರನೇ ಸ್ಥಾನ ಗಳಿಸಲಷ್ಟೇ ಶಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಪುತ್ತಿಲ ಪರಿವಾರದವರನ್ನು ದಿಲ್ಲಿಗೆ ಕರೆಸಿ ಮಾತುಕತೆ ನಡೆಸಲಾಗಿತ್ತು ಎಂಬುದು ತಿಳಿದು ಬಂದಿದೆ.
ಈ ಬೆನ್ನಲ್ಲೇ ಸಂತೋಷ್ ಬುಲಾವ್ ಮೇರೆಗೆ ಅರುಣ್ ಕುಮಾರ್ ಪುತ್ತಿಲ ಮತ್ತು ಪುತ್ತಿಲ ಪರಿವಾರದ ಐವರು ನಾಯಕರಾದ ಅರುಣ್ ಕುಮಾರ್ ಪುತ್ತಿಲ, ಭಾಸ್ಕರ್ ಆಚಾರ್ಯ ಹಿಂದಾರು, ಪುತ್ತೂರಿನ ಖ್ಯಾತ ವೈದ್ಯ ಹಾಗೂ ಪುತ್ತಿಲ ಪರಿವಾರದ ಡಾ. ಸುರೇಶ್ ಪುತ್ತೂರಾಯ, ಉದ್ಯಮಿ ಗಣೇಶ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪುತ್ತಿಲ ಪರ ಬ್ಯಾಟ್ ಬೀಸಿದ ರಾಜರಾಮ್ ಬಿ.ಎಲ್ ಪಾಲ್ಗೊಂಡಿದ್ದಾರೆ ಎಂಬುದು ವೈರಲ್ ಆದ ಫೋಟೊದೊಂದಿ ಬಹಿರಂಗೊಂಡಿದೆ.
ಎರಡು ಗಂಟೆಗೂ ಅಧಿಕ ಕಾಲ ಸಭೆಯ ನಡೆಸಿ ಸಂತೋಷ್ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ವಸ್ತು ಸ್ಥಿತಿಯ ಬಗ್ಗೆ ವಿವರವಾದ ಮಾಹಿತಿ ಪಡೆದಿದ್ದಾರೆ. ಬಿಜೆಪಿಯ ಸದಸ್ಯತ್ವ ಪಡೆದು ಸಕ್ರಿಯರಾಗಿ ಸೇವೆ ಸಲ್ಲಿಸಿ, ಹಳೆಯದನ್ನು ಮರೆತು ಪಕ್ಷ ಕಟ್ಟಲು ಅರುಣ್ ಕುಮಾರ್ ಪುತ್ತಿಲ ಬಳಿ ಸಂತೋಷ್ ಸಹಕಾರ ಕೇಳಿದ್ದಾರೆನ್ನಲಾಗಿದೆ. ಬಿಜೆಪಿ ವಿರುದ್ಧ ಭಾಷಣಗಳನ್ನು ಮಾಡದೇ ಹಿಂದುತ್ವದ ಮೂಲಮಂತ್ರವನ್ನು ಜಪಿಸಿ, ಮಾಧ್ಯಮಗಳಲ್ಲಿ ಹೇಳಿಕೆ ನೀಡುವಾಗ ಸಮಾಜಕ್ಕೆ ತಪ್ಪು ಸಂದೇಶ ಹೋಗದಂತೆ ಎಚ್ಚರ ವಹಿಸಿ ಎಂದು ಅರುಣ್ ಕುಮಾರ್ ಪುತ್ತಿಲ ಅವರಿಗೆ ಸಂತೋಷ್ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರು ಬಿಜೆಪಿ ಭದ್ರಕೋಟೆ ಮತ್ತು ಸಂಘದ ನೆಲೆಯಲ್ಲೂ ಶಕ್ತಿ ಕೇಂದ್ರ ಆಗಿರುವ ಕಾರಣದಿಂದ ಪುತ್ತೂರಿನಲ್ಲಿ ಕಾರ್ಯಕರ್ತರನ್ನು ಒಂದುಗೂಡಿಸುವ ಬಗ್ಗೆ ಅರುಣ್ ಕುಮಾರ್ ಪುತ್ತಿಲ ಬಳಿ ಸಂತೋಷ್ ಮಾತನಾಡಿದ್ದಾರೆ. ಪುತ್ತೂರಿನ ಬಿಜೆಪಿಯ ಅಯಕಟ್ಟಿನಲ್ಲಿರುವ ಮುಖಂಡರುಗಳಿಗೆ ಕಾರ್ಯಕರ್ತರ ಹಿಡಿತವಾಗಲಿ, ಅವರ ಜೊತೆ ಅನ್ನೋನ್ಯ ಸಂಬಂಧವಾಗಲಿ ಇಲ್ಲದಿರುವುದು ಈ ಚುನಾವಣಾ ಸಂದರ್ಭ ಪಕ್ಷದ ಉನ್ನತ ನಾಯಕರ ಗಮನಕ್ಕೆ ಬಂದಿದೆ.