ಪುತ್ತೂರು: ಈಶಾನ್ಯ ರಾಜ್ಯ ಮಣಿಪುರದಲ್ಲಿ ಕ್ರೈಸ್ತರ ಮತಗಳನ್ನು ಪಡೆದುಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲಿ ಕ್ರೈಸ್ತ ಸಮುದಾಯವನ್ನು ಗುರಿಯಾಗಿರಿಸಿ ನಡೆಯುತ್ತಿರುವ ಗಲಭೆ, ನರಮೇಧ, ಲೂಟಿ, ಅತ್ಯಾಚಾರಗಳು ಖಂಡನೀಯವಾಗಿದ್ದು, ತಕ್ಷಣವೇ ರಾಷ್ಟ್ರಪತಿಗಳು ಮದ್ಯೆ ಪ್ರವೇಶಿಸಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ಬಂಡುಕೋರರನ್ನು ನಿಗ್ರಹಿಸುವ ಕೆಲಸ ಮಾಡಬೇಖು ಎಂದು ಪುತ್ತೂರು ಕ್ರಿಶ್ಚಿಯನ್ ಯೂನಿಯರ್ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಆಗ್ರಹಿಸಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿ ಮೈಥೇಯಿ ಮತ್ತು ಕುಕಿ ಪಂಗಡದ ನಡುವೆ ಇಷ್ಟೊಂದು ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ. ಅಲ್ಲದೆ ಮಾಧ್ಯಮಗಳು ಮತ್ತು ಮಾನವ ಹಕ್ಕುಗಳವರು ಮಾತನಾಡುತ್ತಿಲ್ಲ. ಮಣಿಪುರ ಚುನಾವಣೆಯ ಸಂದರ್ಭದಲ್ಲಿ ಹಲವು ಭಾರಿ ಇಲ್ಲಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಗಲಭೆ ಆರಂಭಗೊಂಡ ಬಳಿಕ ಒಂದು ಬಾರಿಯೂ ಇಲ್ಲಿಗೆ ಭೇಟಿ ನೀಡಿಲ್ಲ. ಇದೆಲ್ಲಾ ಪೂರ್ವ ನಿಯೋಜಿತ ಕೃತ್ಯದಂತೆ ತೋರುತ್ತಿದೆ ಎಂದರು.
ಇಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರಪತಿಗಳು ತಕ್ಷಣ ಮಧ್ಯಪ್ರವೇಶಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರಾಣ ಕಳೆದುಕೊಂಡವರಿಗೆ ಹಾಗೂ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕು. ಈ ಬಗ್ಗೆ ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು. ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರನ್ನು ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರಿಶ್ಚಿಯನ್ ಯೂನಿಯನ್ ಗೌರವ ಸಲಹೆಗಾರರಾದ ವಲರೇಯನ್ ಡಯಾಸ್, ಜೆರೋಮಿಯಾಸ್ ಪಾಯಸ್, ಖಜಾಂಜಿ ವಾಲ್ಟರ್ ಸೀಕ್ವೇರಾ, ಸದಸ್ಯರಾದವಿಕ್ಟರ್ ಪಾಯಸ್ ಮತ್ತು ಕೆನ್ಯುಟ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.