ಪುತ್ತೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭಾರತ ಸೇವಾದಳ ಪುತ್ತೂರು ತಾಲೂಕು ಸಮಿತಿ, ಶಿಕ್ಷಣ ಇಲಾಖೆ ಪುತ್ತೂರು ನೇತೃತ್ವದಲ್ಲಿ ಹಾಗೂ ಶಿವಮಣಿ ಕಲಾಸಂಘದ ಸಂಚಾಲಕತ್ವದಲ್ಲಿ, ಕಸಾಪ ಪುತ್ತೂರು, ಸುದಾನ ವಿದ್ಯಾಸಂಸ್ಥೆಯ ಸಹಕಾರದಲ್ಲಿ ಪುತ್ತೂರು ಮತ್ತು ಕಡಬ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯು ನೆಹರು ನಗರದ ಸುಧಾನ ವಿದ್ಯಾಸಂಸ್ಥೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಿತು.
ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರದ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಿಂದ ಪರಿಸರದ ಮಹತ್ವ ಅರಿಯುವುದರ ಜೊತೆಗೆ ಮಕ್ಕಳಲ್ಲಿ ಚಿತ್ರಕಲಾ ಪ್ರತಿಭೆಯೂ ಬೆಳೆಯುವಲ್ಲಿ ಸಹಾಯಕವಾಗುವುದೆಂದು ತಿಳಿಸಿದರು.
ಭಾರತ ಸೇವಾ ದಳ ಹಾಗೂ ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಹಾಗೂ ದೇಶಾಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಾರಂಭವಾದ ಭಾರತ ಸೇವಾದಳ ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿದ್ದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ ಎಂದರು.
ಕ ಸಾ ಪ ಪುತ್ತೂರು ಗೌರವ ಕಾರ್ಯದರ್ಶಿ ಡಾ ಪೀಟರ್ ವಿಲ್ಸನ್ ಪ್ರಭಾಕರ್ ಅವರು ವಿಶ್ವ ಪರಿಸರ ದಿನದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಪ್ರಾತ್ಯಕ್ಷಿತೆಯನ್ನು ಹಾಗೂ ವಿವರಣೆಯನ್ನು ಸುದಾನ ನರ್ಸರಿಯ ಮುಖ್ಯಸ್ಥರಾದ ಶುಶಾಂತ್ ಹಾರ್ವಿನ್ ನೀಡಿದರು.
ಈ ಸಂದರ್ಭದಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಲ್ಲಿ ನಡೆಸಿದ ಚಿತ್ರಕಲಾ ಸ್ಪರ್ಧೆ ಹಾಗೂ ಬಳಿಕ ತಾಲೂಕು ಮಟ್ಟದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತೀರ್ಪುಗಾರರಾಗಿ ಹಿರಿಯ ಸಾಹಿತಿಗಳು ವ್ಯಂಗ ಚಿತ್ರಕಾರ ನಾರಾಯಣ ರೈ ಕುಕ್ಕುವಳ್ಳಿ , ಚಿತ್ರ ಕಲಾವಿದರಾದ ಜಗನ್ನಾಥ ಅರಿಯಡ್ಕ, ನಿಟೀಲಾಕ್ಷ ಸಹಕರಿಸಿದರು.
ದ.ಕ ಜಿಲ್ಲಾ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಎಸ್ ಬಿ ಜಯರಾಮ ರೈ, ಸುದಾನ ವಸತಿಯುತ ಶಾಲಾ ಮುಖ್ಯ ಶಿ್ಕ್ಷಕಿ ಶೋಭಾ ನಾಗರಾಜ್, , ಶಿವಮಣಿ ಕಲಾಸಂಘದ ಉಪಾಧ್ಯಕ್ಷ ಕಲಾವಿದ ಕೃಷ್ಣಪ್ಪ, ಭಾರತ ಸೇವಾದಳದ ಕಾರ್ಯಕಾರಿ ಸಮಿತಿ ಸದಸ್ಯ ಡಾ ಚಾಂದನಿ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ ಉಪಸ್ಥಿತರಿದ್ದರು. ಶಿವಮಣಿ ಕಲಾ ಸಂಘ ಅಧ್ಯಕ್ಷ ಸುದರ್ಶನ್ ಪುತ್ತೂರು ಸ್ವಾಗತಿಸಿದರು. ಸಂಚಾಲಕ ಮನು ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದಿ ಪಿ ಎಸ್ ಕಾರ್ಯಕ್ರಮ ನಿರೂಪಿಸಿದರು. ಭಾರತ ಸೇವಾದಳದ ಜಿಲ್ಲಾ ಸಂಘಟಕ ಟಿ ಎಸ್ ಮಂಜೇಗೌಡ ವಂದಿಸಿದರು.