ಪುತ್ತೂರು : ಗ್ರಾಮ ಪಂಚಾಯತ್‍ಗಳಲ್ಲಿ ತೆರವಾದ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 308 ಎಎ ಮತ್ತು 308 ಎಬಿ ಅನ್ವಯ ದಿನಾಂಕ ನಿಗದಿಗೊಳಿಸಿ ವೇಳಾಪಟ್ಟಿ ಪ್ರಕಟಿಸಿದೆ.
ಪುತ್ತೂರು ತಾಲೂಕಿನ ನಿಡ್ಪಳ್ಳಿ ಹಾಗೂ ಆರ್ಯಾಪು ಗ್ರಾಪಂಗಳಲ್ಲಿ ತೆರವಾದ ಒಂದೊಂದು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಆರ್ಯಾಪು ಗ್ರಾಪಂನ ವಾರ್ಡ್2 (ಹಿಂದುಳಿದ ವರ್ಗ ಎ ಮೀಸಲು) ಕ್ಷೇತ್ರದಿಂದ ಚುನಾಯಿತರಾಗಿದ್ದ ನಿವೃತ್ತ ಎಸ್.ಐ.ರುಕ್ಮಯ್ಯ ಮೂಲ್ಯ ಹಾಗೂ ನಿಡ್ಪಳ್ಳಿ ವಾರ್ಡ್ 2 (ಸಾಮಾನ್ಯ) ಚುನಾಯಿತರಾಗಿದ್ದ ಮುರಳಿ ಭಟ್ ನಿಧನದಿಮದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಜು.6 ರಂದು ಚುನಾವಣೆಗೆ ಸಂಬಂಧಿಸಿ ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಅಂದೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಳ್ಳಲಿದೆ. ಜು.12 ನಾಮಪತ್ರ ಸಲ್ಲಿಸಲು ಅಂತಿಮ ದಿನ, ಜು.13 ರಂದು ನಾಮಪತ್ರ ಪರಿಶೀಲನೆ, ಜು.15 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದೆ. ಜು.23 ರಂದು ಮತದಾನ ನಡೆಯಲಿದ್ದು, ಅವಶ್ಯವಿದ್ದರೆ ಜು.25 ರಂದು ಮರುಮತದಾನ, ಜು.26 ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆ ನಡೆಯುವುದರಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಜು.6 ರಿಂದ 26 ರ ತನಕ ನೀತಿ ಸಂಹಿತೆ ಜ್ಯಾರಿಯಲ್ಲಿರಲಿದೆ. ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ವೀಡಿಯೋ ಚಿತ್ರಿಕರಣ ಮಾಡುವುದು, ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮೊದಲು ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ.