ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇಮಕವಾಗುವ ಸಾಧ್ಯತೆ ಇದೆ.
ವಿರೋಧ ಪಕ್ಷದ ನಾಯಕ ಸ್ಥಾನ ಲಿಂಗಾಯತ ಸಮುದಾಯಕ್ಕೆ ಸಿಕ್ಕಿದರೆ, ಅಧ್ಯಕ್ಷ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ನೀಡಬೇಕಾಗುತ್ತದೆ. ಆ ಹೊತ್ತಿನಲ್ಲಿ ತಮ್ಮ ಆಯ್ಕೆ ಹಿಂದೊಮ್ಮೆ ನಿಕಟವರ್ತಿಯಾಗಿದ್ದ ಶೋಭಾ ಕರಂದ್ಲಾಜೆ ಎಂದು ಯಡಿಯೂರಪ್ಪ ಸೂಚಿಸಿದ್ದಾರೆ.
ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೋಭಾ ಅವರು ಸರ್ಕಾರದ ಮೇಲೆ ಹೆಚ್ಚಿನ ಹಿಡಿತ ಸಾಧಿಸಿದ್ದರು. ಅವರು ಎರಡನೇ ಬಾರಿ ಮುಖ್ಯಮಂತ್ರಿ ಆದಾಗ ಯಡಿಯೂರಪ್ಪ ಅವರ ಕುಟುಂಬದವರು ಮಧ್ಯ ಪ್ರವೇಶಿಸಿ, ಶೋಭಾ ಅವರನ್ನು ಸರ್ಕಾರದಿಂದ ದೂರ ಇರಿಸಿದ್ದರು.
ಇತ್ತೀಚೆಗೆ ಯಡಿಯೂರಪ್ಪ, ವಿಜಯೇಂದ್ರ ಮತ್ತು ಶೋಭಾ ಮಧ್ಯೆ ಸಂಧಾನ ನಡೆದಿದ್ದು, ಎಲ್ಲರೂ ಒಟ್ಟಾಗಿ ಹೋಗುವ ನಿರ್ಧಾರಕ್ಕೆ ಬರಲಾಗಿದೆ. ಸಂತೋಷ್ ಬಣ ನಿತ್ರಾಣಗೊಳ್ಳುತ್ತಿದ್ದಂತೆ ಯಡಿಯೂರಪ್ಪ ಸಕ್ರಿಯರಾಗಲು ಇದೂ ಒಂದು ಕಾರಣ ಎಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆದಿದೆ.