ಪುತ್ತೂರು: ಮಹಿಳೆಯರ ಆತ್ಮವಿಶ್ವಾಸ ಮತ್ತು ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ವಿಶೇಷ ತರಬೇತಿಗಳನ್ನು ಆಯೋಜಿಸುತ್ತಿದೆ ಎಂದು ತಾ.ಪಂ. ಯೋಜನಾಧಿಕಾರಿ ಸುಕನ್ಯಾ ಹೇಳಿದರು.
ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಂಘಿಕ ನಡೆ ಸಮೃದ್ಧಿಯ ಕಡೆ ಮುಖಾಮುಖಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
1989ರಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು, ಪಂಚಾಯತ್ ರಾಜ್ ಸಂಸ್ಥೆಗಳನ್ನು ಪ್ರತಿನಿಧಿಸುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತಿಗಳ ಪ್ರತಿನಿಧಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ತರಬೇತಿಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಅರಿಯಡ್ಕ ಹಾಗೂ ಹಿರೇಬಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಧಿಕಾರಿ, ಸಿಬ್ಬಂದಿ, ಜನಪ್ರತಿನಿಧಿಗಳಿಗೆ ತರಬೇತಿ ಆಯೋಜಿಸಲಾಗಿದೆ ಎಂದ ಅವರು, ಸ್ವಸಹಾಯ ಸಂಘಗಳು ಒಗ್ಗಟ್ಟಾಗಿ ಮುಂದುವರಿದರೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಸಾಧ್ಯ ಎಂದರು.
ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯಂ, ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ, ತಾ.ಪಂ. ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಎಸ್.ಐ.ಆರ್.ಡಿ. ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಬಡಗನ್ನೂರು ಶುಭಹಾರೈಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರು, ಸಾಮಾಜಿಕ ನ್ಯಾಯ ಸಮಿತಿ ಸದಸ್ಯರು, ಸಾಮಾನ್ಯ ಸ್ಥಾಯಿ ಸಮಿತಿ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾಮ ಪಂಚಾಯತ್ ಮಟ್ಟದ ಜಿಪಿಎಲ್ಎಫ್ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಚಿ, ಎಂಬಿಕೆ, ಎಲ್ಸಿಆರ್ಪಿ, ಜೆಂಡರ್ ಪಾಯಿಂಟ್ ಪರ್ಸನ್, ಕೃಷಿ ಸಖಿ, ಪಶು ಸಖಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಎಸ್.ಐ.ಆರ್.ಡಿ. ಸಂಪನ್ಮೂಲ ವ್ಯಕ್ತಿ ಪ್ರತಿಮಾ ಹಾರಾಡಿ ಸ್ವಾಗತಿಸಿ, ವಂದಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಇದರ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದಡಿ ಪಂಚಾಯತ್ ರಾಜ್ ಸಂಸ್ಥೆ ಮತ್ತು ಸ್ವ-ಸಹಾಯ ಸಂಘಗಳ ಒಗ್ಗೂಡಿಸುವಿಕೆ ಸಾಂಘಿಕ ನಡೆ ಸಮೃದ್ಧಿಯ ಕಡೆ ತರಬೇತಿ ನಡೆಯಿತು.