ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳ ಕಡೆಗಣನೆ ಆರೋಪ

ಪರ್ಯಾಯ ಸಾಹಿತ್ಯ ಸಮ್ಮೇಳನ ನಡೆಸಲು ಪ್ರಗತಿಪರ ಸಾಹಿತಿಗಳ ನಿರ್ಧಾರ

ಬೆಂಗಳೂರು : ಮುಂದಿನ ಜನವರಿ 6 ರಿಂದ 8 ರವರೆಗೆ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳು ಮತ್ತು ಪ್ರಮುಖ ಅಧಿವೇಶನಗಳಲ್ಲಿ ಮುಸ್ಲಿಂ ಲೇಖಕರು ಮತ್ತು ಮಹಿಳಾ ಲೇಖಕರನ್ನು ನಿರ್ಲಕ್ಷಿಸಿರುವುದನ್ನು ಪ್ರತಿಭಟಿಸಿ ಜನವರಿ 8 ರಂದು ಬೆಂಗಳೂರಿನಲ್ಲಿ ಪರ್ಯಾಯ ಸಾಹಿತ್ಯ ಸಮ್ಮೇಳನ ಆಯೋಜಿಸಲು ಪ್ರಗತಿಪರ ಸಾಹಿತಿಗಳು ನಿರ್ಧರಿಸಿದ್ದಾರೆ.
ಮುಸ್ಲಿಂ ಲೇಖಕರನ್ನು ಹೊರಗಿಡುವುದು ಮತ್ತು ಲಿಂಗ ತಾರತಮ್ಯ ಮಾಡುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಆದ್ದರಿಂದ ಜನವರಿ 8 ರಂದು ಬೆಂಗಳೂರಿನಲ್ಲಿ ಪರ್ಯಾಯ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಪ್ರಗತಿಪರ ಸಾಹಿತಿಗಳು ನಿರ್ಧರಿಸಿದ್ದಾರೆ. ನಾವು ಇದನ್ನು ಕ್ರೌಡ್ ಫಂಡಿಂಗ್ ಮೂಲಕ ಆಯೋಜಿಸುತ್ತೇವೆ ಎಂದು ಹಿರಿಯ ವಿದ್ವಾಂಸ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಈ ಬಾರಿ ಹಾವೇರಿಯಲ್ಲಿ 86ನೇ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ನಡೆಯಲಿದೆ. ಈಗಾಗಲೇ ಸಮ್ಮೇಳನಕ್ಕೆ ಸಂಪೂರ್ಣ ಚಾಲನೆ ದೊರೆತಿದ್ದು, ಸಿದ್ಧತೆಗಳು ಆರಂಭವಾಗಿವೆ. ಬಸವರಾಜ ಬೊಮ್ಮಾಯಿ ಸಮ್ಮೇಳನ ಉದ್ಘಾಟಿಸಲಿದ್ದು, ಹಲವು ಚುನಾಯಿತ ಪ್ರತಿನಿಧಿಗಳು ಹಾಗೂ ಸಾವಿರಾರು ಸಾಹಿತಿಗಳು ಭಾಗವಹಿಸಲಿದ್ದಾರೆ.
ಆದರೆ, ವಿವಿಧ ಅಧಿವೇಶನಗಳಲ್ಲಿ 40 ಭಾಷಣಕಾರರ ಪೈಕಿ ಮುಖ್ಯ ವೇದಿಕೆಗಳಲ್ಲಿನ ಪ್ರಧಾನ ಅಧಿವೇಶನಗಳಲ್ಲಿ ಅಲ್ಪಸಂಖ್ಯಾತ ಲೇಖಕರು ಅಥವಾ ವಿಷಯ ತಜ್ಞರಿಗೆ ಯಾವುದೇ ಪ್ರಾತಿನಿಧ್ಯವಿಲ್ಲ ಎಂಬ ಆರೋಪ ಕೇಳಿಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 83 ಸಾಧಕರನ್ನು ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನಿಸುತ್ತಿದೆ. ಆದರೆ, ಅವರಲ್ಲಿ ಒಬ್ಬರೇ ಒಬ್ಬರು ಮುಸ್ಲಿಂ ಸಮುದಾಯದವರಿಲ್ಲ ಎಂನ್ನಲಾಗಿದೆ.
ಈ ವರ್ಷ ದಾದಾಪೀರ್ ಜೈಮಾನ್ ಅವರಂತಹ ಮುಸ್ಲಿಂ ಲೇಖಕರಿಗೆ ಕೇಂದ್ರ ಪ್ರಶಸ್ತಿಗಳು ಲಭಿಸಿವೆ. ಹಿರಿಯ ಸಾಹಿತಿಗಳಾದ ಬೊಳುವಾರು ಮುಹಮ್ಮದ್ ಕುಂಞಿ, ಸಾರಾ ಅಬೂಬಕರ್, ಹಸನ್ ನಯೀಮ್ ಸುರಕೋಡ, ರಹಮತ್ ತರೀಕರೆ ಮುಂತಾದವರನ್ನು ಕಡೆಗಣಿಸಲಾಗಿದೆ ಎಂದು ಪ್ರಗತಿಪರರು ಆರೋಪಿಸುತ್ತಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲಿ ಮಹಿಳಾ ಲೇಖಕಿಯರನ್ನು ಕಡೆಗಣಿಸಲಾಗಿದೆ ಎಂಬ ಆರೋಪವೂ ಇದೆ.
ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ, ಪರ್ಯಾಯ ಸಮ್ಮೇಳನ ಇವತ್ತಿನ ತುರ್ತು ಅಗತ್ಯ. ದಾವಣಗೆರೆ ಅಥವಾ ಬೆಂಗಳೂರು ಅನುಕೂಲ. ಕೋಲಾರ, ಮೈಸೂರು, ಶಿವಮೊಗ್ಗವೂ ಆದೀತು. ದೇವನೂರು ಬರಬೇಕು. ಬರಗೂರು ಇರಬೇಕು, ರಾಜೇಂದ್ರ ಚೆನ್ನಿ, ಅರುಣ್‌ ಜೋಳದಕೂಡ್ಲಿಗಿ, ಬಿ. ಎಂ. ಹನೀಫ್‌ ಮೊದಲಾದವರು ಬರುತ್ತಾರೆ. ಅವರವರದೇ ಖರ್ಚು. ಸಭಾಂಗಣ, ಮಧ್ಯಾಹ್ಯ ಊಟ, ಧ್ವನಿವರ್ಧಕ, ಚಹಾ ಇತ್ಯಾದಿಗಳಿಗೆ ಕ್ರೌಡ್ ಫಂಡಿಂಗ್ ಮಾಡೋಣ. ನಾನು ನನ್ನ ಖರ್ಚಲ್ಲಿ ಬರುತ್ತೇನೆ. ಸತ್ಯನಾರಾಯಣ ಪೂಜೆಗೆ ಸುದ್ದಿ ಕೇಳಿಯೇ ಹೋಗಬೇಕಂತೆ. ಇದೂ ಹಾಗೆಯೇ ಆಗಲಿ. ಸಮ್ಮೇಳನದಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಯಾವುದೂ ಯ:ಕಶ್ಚಿತವೂ ಅಲ್ಲ. ಯಾರಾದರೂ ಸಮರ್ಥ ನಾಯಕತ್ವ ಕೊಡಿ ಎಂದು ಬರೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top