ಕೊರಿಯರ್ನಲ್ಲಿ ಬಂದಿದ್ದ ಮಿಕ್ಸಿಯನ್ನು ಪರಿಶೀಲಿಸುವಾಗ ಬ್ಲಾಸ್ಟ್; ಓರ್ವನಿಗೆ ಗಾಯ
ಹಾಸನ: ಮಂಗಳೂರಿನ ಕುಕ್ಕರ್ ಸ್ಫೋಟ ಮಾದರಿಯಲ್ಲೇ ಹಾಸನದಲ್ಲಿ ಕೊರಿಯರ್ ಮೂಲಕ ಬಂದಿದ್ದ ಮಿಕ್ಸರ್ ನಿಗೂಢವಾಗಿ ಸ್ಫೋಟಗೊಂಡಿರುವ ಘಟನೆ ನಿನ್ನೆ ರಾತ್ರಿ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಶಾಪ್ನಲ್ಲಿ ನಡೆದಿದೆ. ಕೊರಿಯರ್ ಮೂಲಕ ಬಂದಿದ್ದ ಹೊಸ ಮಿಕ್ಸರ್ ಟೆಸ್ಟ್ ಮಾಡುತ್ತಿರುವಾಗ ಸ್ಫೋಟಗೊಂಡಿದೆ. ಕೊರಿಯರ್ ಮಾಲೀಕ ಶಶಿಗೆ ಗಂಭೀರ ಗಾಯಗಳಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.
ಮಂಗಳೂರು ಬ್ಲಾಸ್ಟ್ ಕೇವಲ ರಾಜ್ಯ ಮಾತ್ರವಲ್ಲ ದೇಶದಲ್ಲಿ ಸುದ್ದಿಯಾಗಿದೆ. ಆ ಸುದ್ದಿ ಇನ್ನು ಮಾಸುವ ಮುನ್ನವೇ ಇಲ್ಲಿ ನಿಗೂಢವಾಗಿ ಮಿಕ್ಸರ್ ಸ್ಫೋಟಗೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ದೌಡಾಯಿಸಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಆರ್ ಪುರಂನ ಡಿಟಿಡಿಸಿ ಕೊರಿಯರ್ ಶಾಪ್ನಲ್ಲಿ ರಾತ್ರಿ 7.30ಕ್ಕೆ ಮಿಕ್ಸಿ ಬ್ಲಾಸ್ಟ್ ಆಗಿದೆ. ಕೊರಿಯರ್ನಲ್ಲಿ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿದೆ ಎನ್ನುವ ಮಾಹಿತಿ ಇದೆ. ಮಿಕ್ಸಿಯನ್ನು ಆನ್ ಮಾಡಿದಾಗ ಬ್ಲಾಸ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. ಬ್ಲಾಸ್ಟ್ಗೆ ಬೇರೆ ಏನೂ ಇದೆ ಎಂದು ಕಂಡು ಬಂದಿಲ್ಲ. ಮೈಸೂರಿನಿಂದ ಎಫ್.ಎಸ್.ಎಲ್ ನವರು ಬರುತ್ತಿದ್ದು, ಮಿಕ್ಸಿ ಯಾಕೆ ಮತ್ತು ಹೇಗೆ ಬ್ಲಾಸ್ಟ್ ಆಗಿದೆ ಎಂದು ಪರಿಶೀಲನೆ ನಡೆಯುತ್ತದೆ ಎಂದು ಹೇಳಿದ್ದಾರೆ.
ಕೊರಿಯರ್ ಎಲ್ಲಿಂದ ಬಂತು ಎನ್ನುವ ಮಾಹಿತಿ ಇದೆ. ಎಲ್ಲವನ್ನೂ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಶಾರ್ಟ್ ಸರ್ಕ್ಯೂಟ್ ಆಗಿದೆಯೋ ಬೇರೆ ಏನಾದರು ಇದೆಯೋ ಪರಿಶೀಲನೆ ನಡೆಸುತ್ತೇವೆ. ಎಲ್ಲಿಂದ ಯಾರಿಗೆ ಕೊರಿಯರ್ ಬಂದಿತ್ತು ಎಂದು ತನಿಖೆ ಬಳಿಕ ಗೊತ್ತಾಗುತ್ತೆ. ಸದ್ಯಕ್ಕೆ ಯಾವುದೇ ಆತಂಕ ಇಲ್ಲ. ಎಫ್.ಎಸ್ ಎಲ್ನವರು ಬಂದು ವೈಜ್ಞಾನಿಕ ಸಾಕ್ಷ್ಯ ಪಡೆದ ಬಳಿಕ ಎಲ್ಲವೂ ಗೊತ್ತಾಗುತ್ತೆ ಎಂದು ತಿಳಿಸಿದರು.