ಪುತ್ತೂರು : ಪುತ್ತೂರು ಸಹಿತ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಿದ್ದು, ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಬಂದಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಸರ್ವೆ ವಲಯ ಕಾಂಗ್ರೆಸ್ ವತಿಯಿಂದ ಕಲ್ಪನೆ ಸಮುದಾಯಭವನದಲ್ಲಿ ಶನಿವಾರ ನಡೆದ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿಲ್ಲದ ಕಾರಣ ಕಾರ್ಯಕರ್ತರು ನೋವು, ಯಾತನೆಯನ್ನು ಅನುಭವಿಸುವಂತಾಗಿತ್ತು. ಕಾಂಗ್ರೆಸ್ ಗೆಲ್ಲಲೇಬೇಕು ಎಂದು ಕಳೆದ ಚುನಾವಣೆಯಲ್ಲಿ ಕಾರ್ಯಕರ್ತರ ಅವಿರತಶ್ರಮದ ಫಲವಾಗಿ ಇಂದು ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರ ಗೆಲುವು ಸಾಧ್ಯವಾಗಿದೆ, ನಮ್ಮ ನಿರೀಕ್ಷೆಯಂತೆ ರಾಜ್ಯದಲ್ಲಿಯೂ ಕಾಂಗ್ರೆಸ್ ಸರಕಾರ ಬಂದಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಇನ್ನು ಮುಂದೆ ಯಾವುದೇ ಕಾರ್ಯಕರ್ತರು ತಲೆತಗ್ಗಿಸುವ ಅಗತ್ಯವಿಲ್ಲ, ನಿಮ್ಮ ಜೊತೆ ನಾನಿದ್ದೆನೆ ಎಂದು ಶಾಸಕರು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್ ಡಿ ವಸಂತ ಮಾತನಾಡಿ, ಗ್ರಾಮದಲ್ಲಿ ೯ ಕಾಲನಿಗಳಿವೆ ಈ ಕಾಲನಿಗಳ ಅಬಿವೃದ್ದಿಯಾಗಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಸಿಬಂದಿಗಳ ಕೊರತೆ ಇದೆ ಅದನ್ನು ನೀಗಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಆಗಬೇಕಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ, ಮಾತನಾಡಿದರು ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸುರೇಶ್‌ಕುಮಾರ್ ಸೊರಕೆ, ಮಹಾಲಿಂಗ ನಾಯ್ಕ, ಶಕೂರ್ ಹಾಜಿ, ಮೌರಿಶ್ ಮಸ್ಕರೇನಸ್, ಜಯಪ್ರಕಾಶ್ ಬದಿನಾರ್, ಮುರಳೀಧರ್ ರೈ ಮಠಂತಬೆಟ್ಟು, ಅಮಲರಾಮಚಂದ್ರ, ಸರ್ವೆ ವಲಯ ಉಸ್ತುವಾರಿ ರಾಮಚಂದ್ರ ಸೊರಕೆ, ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಎಸ್ ಡಿ, ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ವಲಯ ಕಾಂಗ್ರೆಸ್ ಕಾರ್‍ಯದರ್ಶಿ ಸಿದ್ದಿಕ್ ಸುಲ್ತಾನ್ ಕಾರ್‍ಯಕ್ರಮ ನಿರೂಪಿಸಿದರು.