ಶಿವಮೊಗ್ಗ: ರಾಜ್ಯದಲ್ಲಿ ರೋಬೋಟ್ ಗಳ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಜಾಗತಿಕ ಭಯೋತ್ಪಾದಕಾ ಸಂಘಟನೆ ಐಸಿಸ್ ಸಂಚು ಹೂಡಿದೆ ಎಂದು ಎನ್ಐಎ ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದೆ.
ಶಿವಮೊಗ್ಗ ಟ್ರಾಯಲ್ ಬ್ಲಾಸ್ಟ್ ಮತ್ತು ಐಸಿಸ್ ಲಿಂಕ್ ಕೇಸ್ ನಲ್ಲಿ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಮೆಕಾನಿಕಲ್ ಇಂಜಿನಿಯರ್ ಹಿನ್ನೆಲೆಯ ಐವರು ಶಂಕಿತರಿಂದ ರೋಬೋಟಿಕ್ ದಾಳಿಗೆ ಪ್ಲಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿಚಾರಣೆ ಸಂದರ್ಭದಲ್ಲಿ ಶಂಕಿತ ಉಗ್ರರು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ.
ಶಂಕಿತ ಉಗ್ರ ಮಾಝ್ ಮುನೀರ್ ಮತ್ತು ಮೊಹಮ್ಮದ್ ಶಾರಿಕ್ ಸೇರಿದಂತೆ 9 ಜನರ ವಿರುದ್ಧ ಎನ್ಐಎ ಅಧಿಕಾರಿಗಳು ಹೆಚ್ಚುವರಿ ಚಾರ್ಜ್ ಶಿಟ್ ಸಲ್ಲಿಸಿದ್ದಾರೆ. UA(P) Act 1967, IPC and KS Prevention of Destruction and Loss of Property Act, 1981 ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮೊಹಮ್ಮದ್ ಶಾರಿಕ್ (25), ಮಾಜ್ ಮುನೀರ್ ಅಹ್ಮದ್ (23), ಸೈಯದ್ ಯಾಸಿನ್ (22), ರೀಶಾನ್ ತಾಜುದ್ದೀನ್ ಶೇಖ್ (22), ಹುಜೈರ್ ಫರ್ಹಾನ್ ಬೇಗ್ (22), ಮಜಿನ್ ಅಬ್ದುಲ್ ರಹಮಾನ್ (22), ನದೀಮ್ ಅಹ್ಮದ್ (22), ಜಬೀವುಲ್ಲಾ (32) ಮತ್ತು ನದೀಮ್ ಫೈಝಲ್ ಎನ್ (27) ವಿರುದ್ಧ ಎನ್ಐಎ ಅಧಿಕಾರಿಗಳು ಹೆಚ್ಚುವರಿ ಚಾರ್ಜ್ ಶಿಟ್ ಸಲ್ಲಿಸಿದ್ದಾರೆ.
ಐವರು ಮೆಕಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ. ಮೊಹಮ್ಮದ್ ಶಾರಿಕ್ (25), ಮಾಜ್ ಮುನೀರ್ ಅಹ್ಮದ್ (23), ಸೈಯದ್ ಯಾಸಿನ್ (22), ರೀಶಾನ್ ತಾಜುದ್ದೀನ್ ಶೇಖ್ (22), ಹುಜೈರ್ ಫರ್ಹಾನ್ ಬೇಗ್ (22), ಮಜಿನ್ ಅಬ್ದುಲ್ ರಹಮಾನ್ (22) ಮೆಕಾನಿಕಲ್ ವಿದ್ಯಾರ್ಥಿಗಳು.
ಬಂಧಿತರನ್ನು ಎನ್ಐಎ ತೀವ್ರ ವಿಚಾರಣೆ ನಡೆಸಿತ್ತು. ಐಸಿಸ್ ಹ್ಯಾಂಡ್ಲರ್ ನಿಂದ ರೋಬೋಟಿಕ್ ಕೋರ್ಸ್ ಓದುವಂತೆ ನಿರ್ದೇಶನ ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಅಲ್ಲದೆ, ಭವಿಷ್ಯದ ಭಯೋತ್ಪಾದಕ ಚಟುವಟಿಕೆಗಳಿಗೆ ತಯಾರಾಗುವಂತೆ ತಿಳಿಸಲಾಗಿತ್ತು. ಶಂಕಿತರು ವಿದೇಶದಲ್ಲಿರುವ ಐಸಿಸ್ ಭಯೋತ್ಪಾದಕರೊಂದಿಗೆ ನೇರ ಸಂಪರ್ಕದಲ್ಲಿದ್ದರು. ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸಿನ್ ಪ್ರಮುಖ ಆರೋಪಿಗಳಾಗಿದ್ದು, ಇವರು ಐಸಿಸ್ ನಿರ್ದೇಶನದ ಮೇರೆಗೆ ಭಯೋತ್ಪಾದನೆ ಉತ್ತೇಜಿಸುವ ಕೃತ್ಯದಲ್ಲಿ ಶಾಮೀಲಾಗಿದ್ದರು ಎನ್ನಲಾಗಿದೆ. ಆನ್‌ಲೈನ್ ಹ್ಯಾಂಡ್ಲರ್ ಕ್ರಿಪ್ಟೋ ಕರೆನ್ಸಿಗಳ ಮೂಲಕ ಆರೋಪಿಗಳಿಗೆ ಹಣ ನೀಡಿದ್ದ ಎಂದು ತಿಳಿದುಬಂದಿದೆ.