ಮಂಗಳೂರು: ರಾಜ್ಯ ಸರ್ಕಾರ ತನ್ನ ಹಿಂದೂ ವಿರೋಧಿ ನಡೆಯನ್ನು ಕೈ ಬಿಡದಿದ್ದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಬಗ್ಗೆ ಸ್ವಾಮೀಜಿಗಳು ಕೈಗೊಂಡಿದ್ದಾರೆ.
ಕಾಂಗ್ರೆಸ್ನ ಹಿಂದೂ ವಿರೋಧಿ ನಡೆಯ ವಿರುದ್ಧ ನಗರದ ಬಾಳಂಭಟ್ ಹಾಲ್ನಲ್ಲಿ ಸ್ವಾಮೀಜಿಗಳು ಧರ್ಮ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರವು ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರವನ್ನು ಈ ಕೂಡಲೇ ಕೈ ಬಿಡಬೇಕು ಎಂದು ಗುರುಪುರ ವಜ್ರದೇಹಿ ಸ್ವಾಮೀಜಿ, ಒಡಿಯೂರು ಗುರುದೇವಾನಂದ ಸ್ವಾಮೀಜಿ, ಮಾಣಿಲ ಸ್ವಾಮೀಜಿ, ಕೇಮಾರು ಸೇರಿ ಹಲವು ಸಂತರು ಆಗ್ರಹಿಸಿದ್ದಾರೆ.
ಸುದೀರ್ಘ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಒಡಿಯೂರು ಗುರುದೇವಾನಂದ ಸ್ವಾಮೀಜಿ ವಜ್ರದೇಹಿ ಸ್ವಾಮೀಜಿ, ಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆವಾಪಸ್ ಪಡೆಯಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದೇವೆ. ಒಂದು ವೇಳೆ ಸರ್ಕಾರವು ಈ ಕಾಯ್ದೆಯನ್ನು ವಾಪಸ್ ಪಡೆದರೆ ಸಮಾಜದಲ್ಲಿ ಸಂಘರ್ಷ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರದ್ದು ಮಾಡಿದರೆ ಗೋವಿನ ಸಂತತಿ ನಾಶವಾಗಲಿದೆ. ಈ ನಿರ್ಣಯವು ಹಿಂದೂ ವಿರೋಧಿ ನಿರ್ಣಯವಾಗಿದೆ. ಹೀಗಾಗಿ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಲೇಬೇಕು. ಇಲ್ಲವಾದಲ್ಲಿ ನಾವು ಸಂತರೆಲ್ಲ ಸೇರಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ರಾಜ್ಯ ಸರ್ಕಾರ ನಮ್ಮ ಮನವಿಗೆ ಸಕಾರಾತ್ಮಕ ಸ್ಪಂದನೆ ನೀಡುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಸಂತರೆಲ್ಲ ಉಪವಾಸ ಸತ್ಯಾಗ್ರಹಕ್ಕೆ ಕುಳಿತರೆ ಹಿಂದೂ ಸಮಾಜದ ಆಕ್ರೋಶ ಭುಗಿಲೇಳಲಿದೆ. ಇದರಿಂದ ರಾಜ್ಯದಲ್ಲಿ ಶಾಂತಿ ವ್ಯವಸ್ಥೆ ಹದಗೆಡಲಿದೆ. ರಾಜ್ಯದಲ್ಲಿ ಶಾಂತಿ ಐಕ್ಯತೆ ಕಾಪಾಡುವುದು ಸರ್ಕಾರದ ಜಾವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಈ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಆರ್ಎಸ್ಎಸ್ ಪ್ರಮುಖರು ಭಾಗಿಯಾಗಿದ್ದರು.