ಪುತ್ತೂರು: ಇಂದಿನ ರಾಜ್ಯ ಸರಕಾರ ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸಲು ಚಿಂತನೆ ನಡೆಸುತ್ತಿದ್ದು, ಸರಕಾರ ಹಿಂದೂ ವಿರೋಧಿ ನೀತಿಯನ್ನು ಕೈಬಿಟ್ಟು, ಮತೀಯವಾದಿಗಳನ್ನು ಬೆಂಬಲಿಸಲು ಮುಂದಾದರೆ ಸಾಧು ಸಂತರು ಒಗ್ಗಟ್ಟಾಗಿ ಹೋರಾಟ ನಡೆಸಬೇಕಾದೀತು. ಈ ಕುರಿತು ಹಿಂದೂ ಧರ್ಮ ಬಾಂಧವರು ಒಗ್ಗಟ್ಟಾಗಿ ಸರಕಾರದ ನಿರ್ಧಾರದ ವಿರುದ್ಧ ಹೋರಾಟ ನಡೆಸಲು ಅಣಿಯಾಗಬೇಕಾಗಿದೆ ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ.
ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಈ ಹಿಂದಿನ ಸರಕಾರ ಜಾರಿಗೆ ತಂದಿದೆ. ಇಂದು ರಾಜಕೀಯ ದುರುದ್ದೇಶದಿಂದ ಇಂದಿನ ರಾಜ್ಯ ಸರಕಾರ ಕಾಯ್ದೆಯನ್ನು ರದ್ದುಪಡಿಸಲು ಮುಂದಾಗಿದೆ. ಅಲ್ಲದೆ, ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿರುವಂತಹ ಹಿಂದೂ ಸಂಘಟನೆಗಳನ್ನು ನಿಷೇಧಿಸುವ ಚಿಂತನೆಯನ್ನು ನಡೆಸುತ್ತಿದೆ. ಇದು ಸರಕಾರಕ್ಕೆ ಶೋಭೆ ತರುವ ವಿಚಾರವಲ್ಲ ಎಂದು ತಿಳಿಸಿದರು.
ದೇಶದಲ್ಲಿ ಅದೆಷ್ಟೋ ಸಾಧು ಸಂತರಿದ್ದಾರೆ. ಆದರೆ, ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳುತ್ತಿದ್ದರೂ ಯಾರೂ ಎಚ್ಚೆತ್ತುಕೊಂಡಿಲ್ಲ. ಸಾಧು ಸಂತರ ಈ ಮೌನದ ಬಗ್ಗೆ ಹಿಂದೂ ಸಂಘಟನೆಗಳು ಬೇಸರ ವ್ಯಕ್ತಪಡಿಸುತ್ತಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಸರಕಾರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಬಾರದು. ಈ ನಿಟ್ಟಿನಲ್ಲಿ ಎಲ್ಲಾ ಹಿಂದೂಗಳು, ಹಿಂದೂ ಸಂಘಟನೆಗಳು ಸಂಘಟಿತರಾಗಿ ಮನಸ್ಸಿನಲ್ಲಿ ಹೆಪ್ಪುಗಟ್ಟಿರುವ ನೋವು ಹೊರಹೊಮ್ಮುವ ಕಾಲ ಸನ್ನಿಹಿತವಾಗಿದೆ. ಇಡೀ ದೇಶವೇ ಈ ಕುರಿತು ಜಾಗೃತವಾಗಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಬೇಕಾಗಿದೆ. ಹಿಂದೂ ಸಮಾಜಕ್ಕೆ ಅನ್ಯಾಯವಾದಾಗ ಹಿಂದೂಗಳು ಪರಸ್ಪರ ಕೈಜೋಡಿಸುವ ಕಾರ್ಯ ನಡೆಸಬೇಕಾಗಿದೆ ಎಂದು ಶ್ರೀ ಮೋಹನದಾಸ್ ಸ್ವಾಮೀಜಿ ಹೇಳಿದರು.
ಹಿಂದೂ ಸಮಾಜಕ್ಕೆ ಅನ್ಯಾಯವಾದಾಗ ಸಾಧು ಸಂತರು, ಮಠ ಮಂದಿರಗಳು, ಶ್ರದ್ಧಾ ಕೇಂದ್ರಗಳು ಒಗ್ಗಟ್ಟಾಗಿ ಪ್ರತಿಭಟಿಸಬೇಕಾದ ಅಗತ್ಯವಿದೆ. ಹಿಂದೂಗಳ ದೌರ್ಬಲ್ಯದಿಂದ ದೇಶದ ವಿವಿದೆಡೆಗಳಲ್ಲಿ ಅದೆಷ್ಟೋ ಅಧರ್ಮದ ಪ್ರಭಾವಗಳು ಸಕ್ರಿಯವಾಗುವಂತಾಗಿದೆ. ಹಿಂದೂ ಶಕ್ತಿಯನ್ನು ನಾಶ ಮಾಡಲು ಸರ್ವ ರೀತಿಯ ಪ್ರಯತ್ನಗಳು ನಡೆಯುತ್ತಿದೆ. ಇದನ್ನು ತಡೆಗಟ್ಟಲು ಅಧಿಕಾರಿ ವರ್ಗದವರು ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದಕ್ಕೆ ಆಗಬಹುದಾದ ಆಘಾತಕಾರಿ ಘಟನೆಗಳಿಗೆ ಅಧಿಕಾರಿ ವರ್ಗದವರೇ ಕಾರಣವಾಗುತ್ತಾರೆ.
ಅನ್ಯ ಮತೀಯರ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಹಿಂಸೆ ಮಾಡಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆಯಾಗದಂತೆ ಮಾಡಲು ಸೂಕ್ತ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಆಂದೋಲನದ ಎಚ್ಚರಿಕೆ :
ಬಲವಂತ, ಆಸೆ ಆಮಿಷಗಳ ಮೂಲಕ, ಮೋಸದ ಜಾಲದ ಮೂಲಕ ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಡುವುದು ಸಮಾಜದಲ್ಲಿ ಒಡಕನ್ನು ಸೃಷ್ಟಿಸುವ ಕೃತ್ಯವಾಗಿದೆ. ಇದಕ್ಕೆ ಸರಕಾರ ನೇರವಾಗಿ ಪ್ರೋತ್ಸಾಹ ನೀಡುತ್ತಿರುವುದು ಖಂಡನೀಯ. ಸರಕಾರ ನಿಷೇಧ ರದ್ದುಗೊಳಿಸಲು ಮುಂದಾದರೆ ರಾಜ್ಯಾದ್ಯಂತ ಹೋರಾಟ, ಆಂದೋಲನಗಳನ್ನು ನಡೆಸಲಾಗುವುದು. ಸಮಾಜದ್ರೋಹಿ ಚಿಂತನೆಯ ನಿಲುವಿನಿಂದ ಸರಕಾರ ಹಿಂದಕ್ಕೆ ಸರಿಯಬೇಕು ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ ಎಚ್ಚರಿಕೆ ನೀಡಿದರು.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ತಿನ ವಿಟ್ಲ ಪ್ರಖಂಡ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಬಜರಂಗದಳದ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲ್, ಬಂಟ್ವಾಳ ಪ್ರಖಂಡ ಸಂಯೋಜಕ ಸಂತೋಷ್ ಸರಪಾಡಿ ಉಪಸ್ಥಿತರಿದ್ದರು.