ಪುತ್ತೂರು: ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ನಾರಾಯಣ ಕೆ. ಅವರಿಗೆ ಅಭಿನಂದನೆ, ನೂತನ ಕೊಠಡಿ ಲೋಕಾರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜೂ.30 ರಂದು ಶಾಲಾ ಉತ್ತುಂಗ ಸಭಾಭವನದಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಸಂಚಾಲಕ, ನ್ಯಾಯವಾದಿ ಚಿದಾನಂದ ಬೈಲಾಡಿ ತಿಳಿಸಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾರಾಯಣ ಅವರು 2014 ರಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದು, ನಂತರದ ದಿನಗಳಲ್ಲಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ತನ್ನನ್ನು ತೊಡಗಿಸಿಕೊಂಡು ಶಾಲಾ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ವಿದ್ಯಾಸಂಸ್ಥೆಗೆ ಬೇಕಾದ ಸಭಾಭವನ, ಇತರ ಕಟ್ಟಡಗಳು, ಸರಕಾರದ ಅನುದಾನ ಅಲ್ಲದೆ ವಿದ್ಯಾಭಿಮಾನಿಗಳ ಸಹಕಾರದಿಂದ ಮಾಡಿರುತ್ತಾರೆ. ಅಲ್ಲದೆ ಕಳೆದ ಎಂಟು ವರ್ಷದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನಿರಂತರ ಶೇ.100 ಫಲಿತಾಂಶ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಜೂ.30 ರಂದು ತಮ್ಮ ವೃತ್ತಿಯಿಂದ ನಿವೃತ್ತಿ ಹೊಂದುತ್ತಿದ್ದು, ಈ ನಿಟ್ಟಿನಲ್ಲಿ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಮಾರಂಭವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಬೆಟ್ಟಂಪಾಡಿ ಗ್ರಾಪಂ ಅಧ್ಯಕ್ಷೆ ಪವಿತ್ರ ಡಿ. ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ನೈಋತ್ಯ ಶಿಕ್ಷಕ ಕ್ಷೇತ್ರದ ಶಾಸಕ ಭೋಜೇ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್., ಮಾಜಿ ಶಾಸಕ ಸಂಜೀವ ಮಠಂದೂರು, ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು, ಬೆಟ್ಟಂಪಾಡಿ ಗ್ರಾಪಂ ಸದಸ್ಯರಾದ ಪ್ರಕಾಶ್ ರೈ, ಉಮಾವತಿ ಎಸ್., ವಿದ್ಯಾ ಸುರೇಶ್, ಗೋಪಾಲ ಬೈಲಾಡಿ, ಶಾಲಾಭಿವೃದ್ಧಿ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಎನ್‍ಆರ್ ಸಿಎಲ್ ಸೀತಾರಾಮ ರೈ ಕೈಕಾರ, ಸೆಲ್ಕೋ ಸೋಲಾರ್ ಲಿ.ನ ಪ್ರಸಾದ್ ಬಿ., ಉಪ್ಪಳಿಗೆ ಶ್ರೀ ವಿಷ್ಣು ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಉಪ್ಪಳಿಗೆ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಅಧ್ಯಕ್ಷ ಮನಮೋಹನ್ ರೈ, ಉಪಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕಾರ್ಯದರ್ಶಿ ರಾಮಚಂದ್ರ ಕೆ., ಪ್ರಕಾಶ್ ರೈ ಉಪಸ್ಥಿತರಿದ್ದರು.