ಪುತ್ತೂರು: ಹಾಸನ – ಮಾರೇನಹಳ್ಳಿ ನಡುವಿನ ಚತುಷ್ಪಥ ಕಾಮಗಾರಿಯನ್ನು ಮುಂದುವರಿಸಲು ಅನುಮೋದಿಸಿರುವ ಕೇಂದ್ರ ಸರಕಾರ, ಮುಂದಿನ ಹಂತದಲ್ಲಿ ಮಾರೇನಹಳ್ಳಿಯಿಂದ ಅಡ್ಡಹೊಳೆವರೆಗಿನ ರಸ್ತೆ ಅಗಲೀಕರಣ ಹಾಗೂ ಚತುಷ್ಪಥಗೊಳಿಸಲು ಮುಂದಾಗಿದೆ.
ಎನ್.ಎಚ್.75 ಅಡಿ ಬರುವ ಶಿರಾಡಿಘಾಟಿನ ಮಾರೇನಹಳ್ಳಿಯಿಂದ ಅಡ್ಡಹೊಳೆವರೆಗೆ ಈ ಚತುಷ್ಪಥ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಕೇಂದ್ರ ಸರಕಾರ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ 1976.15 ಕೋಟಿ ರೂ. ಬಿಡುಗಡೆ ಮಾಡಿದೆ. ಫೆ. 2ರ ಮೊದಲು ಕಾಮಗಾರಿಗೆ ಬಿಡ್ ಆಹ್ವಾನಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ಎರಡು ವರ್ಷದಲ್ಲಿ ಅಡ್ಡಹೊಳೆಯಿಂದ ಹಾಸನದವರೆಗೆ ಚತುಷ್ಪಥದಲ್ಲಿ ಸಂಚರಿಸಲು ಸಾಧ್ಯ.
ಮಂಗಳೂರು- ಬೆಂಗಳೂರು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಶಿರಾಡಿ ಘಾಟ್ ಅಥವಾ ಎನ್.ಎಚ್. 75. ಈ ಹೆದ್ದಾರಿ ತೀರಾ ಹದಗೆಟ್ಟಿ ಹೋಗಿ, ಸಂಚಾರವೇ ದುಸ್ಥರವಾಗಿತ್ತು. ಬಳಿಕ ಎರಡು ಹಂತದಲ್ಲಿ ಘಾಟ್ ಹೆದ್ದಾರಿಯನ್ನು ಅಭಿವೃದ್ಧಿಗೊಳಿಸಿದ್ದು, ಶಿರಾಡಿ ಘಾಟ್ ಇತರ ಘಾಟ್ ರಸ್ತೆಗಳಿಗಿಂತ ತುಂಬಾ ಸುಧಾರಿಸಿತ್ತು. ಇದೀಗ ಹಾಸನದಿಂದ ಮಾರೇನಹಳ್ಳಿ ನಡುವಿನ ಸುಮಾರು 189.7 ಕೀಲೋ ಮೀಟರ್ ಅಂತರದ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇದರ ನಡುವೆಯೇ ಮಾರೇನಹಳ್ಳಿಯಿಂದ ಅಡ್ಡಹೊಳೆ ನಡುವಿನ ಹೆದ್ದಾರಿಯನ್ನು ಚತುಷ್ಪಥಗೊಳಿಸಲು ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.
5 ವರ್ಷ ನಿರ್ವಹಣೆಯ ಜವಾಬ್ದಾರಿ
ಮುಂದಿನ 2 ವರ್ಷ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಕಾರ್ಯಕ್ಕೆ ಮುಂದಾದರೆ, ಕಾಮಗಾರಿ ಪೂರ್ಣಗೊಂಡ ಬಳಿಕ ನಿರ್ವಹಣೆಯ ಜವಾಬ್ದಾರಿಯೂ ಗುತ್ತಿಗೆದಾರರ ಮೇಲಿದೆ. ಅಂದರೆ ಕಾಮಗಾರಿ ಪೂರ್ಣಗೊಂಡ ನಂತರದ 5 ವರ್ಷ ಚತುಷ್ಪಥ ಹೆದ್ದಾರಿಯನ್ನು ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರೇ ನಿರ್ವಹಿಸಬೇಕು ಎನ್ನುವ ಷರತ್ತನ್ನು ವಿಧಿಸಲಾಗಿದೆ.